ಸಾಕ್ಷಿ ದೂರುದಾರ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿರುವುದಾಗಿ ಹೇಳಿರುವ ಸಾಕ್ಷಿ ದೂರುದಾರ ಮೂರು ದಿನ ವಾಸ್ತವ್ಯ ಹೂಡಿದ್ದ ಹೋರಾಟಗಾರ ಜಯಂತ್ ಅವರ ನಿವಾಸದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಸ್ಥಳ ಮಹಜರು ನಡೆಸಿದೆ.
ಬೆಳ್ತಂಗಡಿಯಿಂದ ಎರಡು ವಾಹನದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ದೂರುದಾರನನ್ನು ಕರೆದುಕೊಂಡು ಬಂದ ಎಸ್‌ಐಟಿ ಅಧಿಕಾರಿಗಳು, ಸೊಕೋ ಟೀಂ ಜತೆ ಪೀಣ್ಯದ ಟಿ.ಜಯಂತ್ ಅವರ ಬಾಡಿಗೆ ನಿವಾಸಕ್ಕೆ ಭೇಟಿ ನೀಡಿ, ಶೋಧ ನಡೆಸಿತು.
ಸ್ಥಳ ಮಹಜರು ನಡೆಸಿದ ಸಂದರ್ಭದಲ್ಲಿ ಜಯಂತ್ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಹಾಗೂ ಮಕ್ಕಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ದೂರುದಾರ ಯಾವಾಗ ಮನೆಗೆ ಬಂದಿದ್ದ? ಎಷ್ಟು ದಿನ ಮನೆಯಲ್ಲಿದ್ದ? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಅಕ್ಕಪಕ್ಕದ ಮನೆಗಳ ನಿವಾಸಿಗಳನ್ನು ದೂರುದಾರನ ವಾಸ್ತವ್ಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಸತತ 5 ತಾಸು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಯಂತ್ ಅವರ ಪತ್ನಿಯ ಮೊಬೈಲ್ ವಶಕ್ಕೆ ಪಡೆದಿದೆ. ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ಪಂಚನಾಮೆ ಮಾಡಲಾಯಿತು.
ವಕೀಲರ ಭೇಟಿಗೆ ಬೆಂಗಳೂರಿಗೆ ಬಂದಿದ್ದ ದೂರುದಾರ, ಜಯಂತ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಹಾಗೂ ಮೂರನೇ ಬಾರಿ ಜಯಂತ್ ನಿವಾಸಕ್ಕೆ ಬಂದ ವೇಳೆ ತಲೆ ಬುರುಡೆ ತಂದಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.