ಸಾಕ್ಷಿ ದೂರುದಾರನೊಂದಿಗೆ ಎಸ್‌ಐಟಿ ಅಧಿಕಾರಿಗಳು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿರುವುದಾಗಿ ಹೇಳಿರುವ ಸಾಕ್ಷಿ, ದೂರುದಾರ ಉಳಿದುಕೊಂಡಿದ್ದ ವಿದ್ಯಾರಣ್ಯಪುರದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ನಸುಕಿನಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಜರು ನಡೆಸಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ಅವರ ಮನೆ ಶೋಧ ಮುಕ್ತಾಯಗೊಂಡ ಬೆನ್ನಲ್ಲೇ ಭಾನುವಾರ ನಸುಕಿನ 2 ಗಂಟೆಯಲ್ಲಿ ದೂರುದಾರನ ಜತೆ ತಿಂಡ್ಲು ಸರ್ಕಲ್ ಬಳಿಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ತನಿಖಾ ತಂಡ, ಮಧ್ಯಾಹ್ನದವರೆಗೂ ಪ್ರಕ್ರಿಯೆ ನಡೆಸಿತು. ಸತತ ಹತ್ತು ತಾಸು ಅಧಿಕಾರಿಗಳು ವಿಚಾರಣೆ ನಡೆಸಿದರು.
ಎಸ್ಪಿ ಸೈಮನ್ ನೇತೃತ್ವದಲ್ಲಿ 20 ಅಧಿಕಾರಿಗಳು, ಸಿಬ್ಬಂದಿ, ಸೀನ್ ಆಫ್ ಕ್ರೈಂ (ಸುಕೋ), ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲಿದ್ದರು. ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ ವಾಸವಿರುವ ಫ್ಲ್ಯಾಟ್‌ನಿಂದ ಒಂದೂವರೆ ಕಿಲೊ ಮೀಟರ್ ದೂರದಲ್ಲಿರುವ ಸರ್ವಿಸ್ ಅಪಾರ್ಟ್ಮೆಂಟ್ನ ಇಂಚಿಂಚೂ ಶೋಧ ಮಾಡಲಾಯಿತು. ಯಾರ ಹೆಸರಲ್ಲಿ ಯಾವಾಗ ರೂಂ ಬುಕಿಂಗ್ ಆಗುತ್ತಿತ್ತು? ಎಷ್ಟು ಜನರು ರೂಂಗೆ ಬರುತ್ತಿದ್ದರು? ಎಷ್ಟು ಬಾರಿ ಬುಕ್ ಆಗಿದೆ? ಯಾರು ಹಣ ಪಾವತಿ ಮಾಡುತ್ತಿದ್ದರು? ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿದೆ.
ಲೆಡ್ಜರ್ ಬುಕ್, ಅಪಾರ್ಟ್ಮೆಂಟ್ನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಲಾಯಿತು. ಎಲ್ಲಾ ಪ್ರಕ್ರಿಯೆ, ಹೇಳಿಕೆಗಳನ್ನು ವಿಡಿಯೊ ರೆಕಾರ್ಡ್ ಮಾಡಲಾಯಿತು.
ಸಂಚು ರೂಪಿಸುವುದಕ್ಕೂ ಮುನ್ನ ಅಂದರೆ ನಾಲ್ಕೈದು ತಿಂಗಳ ಹಿಂದೆ ಸಾಕ್ಷಿ ದೂರುದಾರ ಉಳಿದುಕೊಂಡಿದ್ದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿಯೇ ಗಿರೀಶ್ ಮಟ್ಟೆಣ್ಣನವರ, ಮಹೇಶ್ ಶೆಟ್ಟಿ, ಸುಜಾತಾ ಭಟ್, ಜಯಂತ್ ಅವರು ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬಳಿಕ ಬ್ಯಾಗ್‌ನಲ್ಲಿ ದೆಹಲಿಗೆ ತಲೆ ಬುರುಡೆ ಕೊಂಡೊಯ್ದು, ಅಲ್ಲಿನ ವಕೀಲರೊಬ್ಬರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ತಿರಸ್ಕರಿಸಿ, ಸ್ಥಳೀಯ ಠಾಣೆಯಲ್ಲಿ ದೂರು ನೀಡಲು ಕೋರ್ಟ್ ಸೂಚಿಸಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಬ್ಬ ದೂರುದಾರ ಟಿ. ಜಯಂತ್ ಅವರು ಸುಪ್ರೀಂ ಕೋರ್ಟ್ ಮುಂದೆ ನಿಂತಿರುವ ಫೋಟೊವನ್ನು ಬಿಡುಗಡೆ ಮಾಡಿದ್ದಾರೆ.
ದಾಖಲೆ ವಶಕ್ಕೆ ಪಡೆದ ತನಿಖಾ ತಂಡ
ನಗರದಲ್ಲಿ ಎಸ್‌ಐಟಿ ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದೆ. ಶನಿವಾರ ಟಿ.ಜಯಂತ್ ಅವರ ನಿವಾಸ ಹಾಗೂ ಭಾನುವಾರ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಕೆಲವು ವಸ್ತು ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಹುಟ್ಟೂರು ಮತ್ತು ಎರಡನೇ ಪತ್ನಿ ವಾಸವಾಗಿರುವ ತಮಿಳುನಾಡಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ವಿಷಯ ಹುಡುಗಾಟದ್ದಲ್ಲ. ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಸೋಮವಾರ ನಡೆಯಲಿರುವ ಧರ್ಮಸ್ಥಳ ಚಲೊ ಪಕ್ಷಾತೀತವಾದುದು.–ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ದಕ್ಷಿಣ ಕನ್ನಡ, ಕರಾವಳಿಯಲ್ಲಿ ಜನರು ಕಾಂಗ್ರೆಸ್‌ಗೆ ಮಣೆ ಹಾಕುತ್ತಿಲ್ಲ. ಈ ಭಾಗದ ಜನರ ಒಲವು ಗಳಿಸಲು ರಾಜ್ಯ ಸರ್ಕಾರವೇ ಧರ್ಮಸ್ಥಳ ಪ್ರಕರಣದಲ್ಲಿ ಹುನ್ನಾರ ನಡೆಸಿದೆ.–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.