ADVERTISEMENT

ಧರ್ಮಸ್ಥಳದ ಬುರುಡೆಯನ್ನಲ್ಲ, ಸಾವಿನ ತನಿಖೆ ನಡೆಸಿ: ಮನವಿ ಸ್ವೀಕರಿಸಿದ ಮಹಿಳಾ ಆಯೋಗ

‘ಕೊಂದವರು ಯಾರು’ ಅಭಿಯಾನದ ಸಹಿ ಸಂಗ್ರಹ ಮನವಿ ಸ್ವೀಕರಿಸಿದ ನಾಗಲಕ್ಷ್ಮೀ ಚೌಧರಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:55 IST
Last Updated 10 ಡಿಸೆಂಬರ್ 2025, 16:55 IST
ಸಹಿ ಸಂಗ್ರಹದ ಮನವಿಯನ್ನು ನಾಗಲಕ್ಷ್ಮೀ ಚೌಧರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. 
ಪ್ರಜಾವಾಣಿ ಚಿತ್ರ
ಸಹಿ ಸಂಗ್ರಹದ ಮನವಿಯನ್ನು ನಾಗಲಕ್ಷ್ಮೀ ಚೌಧರಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘20 ವರ್ಷಗಳಲ್ಲಿ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಅತ್ಯಾಚಾರ, ನಾಪತ್ತೆ, ಸಾವುಗಳ ಬಗ್ಗೆ ತನಿಖೆ ನಡೆಸಿ ಎಂದು ಎಸ್‌ಐಟಿಗೆ ಪತ್ರ ಬರೆದಿದ್ದೇನೆಯೇ ಹೊರತು ಬುರುಡೆ ಚಿನ್ನಯ್ಯನಿಗಾಗಿ ಅಲ್ಲ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

‘ಕೊಂದವರು ಯಾರು’ ಅಭಿಯಾನದ ಅಂಗವಾಗಿ ‘ನ್ಯಾಯಕ್ಕಾಗಿ ಮಹಿಳೆಯರ ಆಗ್ರಹ’ ಸಹಿ ಸಂಗ್ರಹದ ಮನವಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಿ ಅವರು ಮಾತನಾಡಿದರು.

‘ಎಸ್‌ಐಟಿ ದಾರಿ ತಪ್ಪುತ್ತಿದೆ. ಬುರುಡೆ ಚಿನ್ನಯ್ಯನ ತನಿಖೆಗೆ ಸೀಮಿತವಾಗುತ್ತಿದೆ ಎಂದು ಅನಿಸಿದ ಕಾರಣ ಪತ್ರ ಬರೆದೆ. ಚಿನ್ನಯ್ಯ ಒಬ್ಬ ಸಾಕ್ಷಿ ಅಷ್ಟೇ. ಅವನು ಹೇಳಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ನೀವು ಕಂಡುಕೊಳ್ಳಿ. ಆದರೆ, ಎಸ್‌ಐಟಿ ತನಿಖೆ ಅಂದರೆ ಅಷ್ಟಕ್ಕೆ ಸೀಮಿತವಾಗಬಾರದು’ ಎಂದು ತಿಳಿಸಿದರು.

ADVERTISEMENT

‘ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದರೆ, ಕೊಲೆಯಾದರೆ, ಹೆಣ್ಣುಮಕ್ಕಳು ನಾಪತ್ತೆಯಾದರೆ ನ್ಯಾಯಕ್ಕಾಗಿ ಪತ್ರ ಬರೆದರೆ ನನ್ನನ್ನು ಎಡಪಂಥೀಯಳೆಂದು ಬಿಂಬಿಸಿದರು. ನ್ಯಾಯ ಕೇಳಿದ ಕೂಡಲೇ ಹೇಗೆ ಎಡಪಂಥೀಯಳಾಗುತ್ತೇನೆ? ಮಹಿಳೆಗೆ ಯಾವ ಜಾತಿ, ಧರ್ಮ, ಪಂಥಗಳು ಇರುವುದಿಲ್ಲ. ಆಕೆ ಯಾವುದೇ ಧರ್ಮದಲ್ಲಿದ್ದರೂ ದೌರ್ಜನ್ಯಗಳು ನಡೆದೇ ನಡೆಯುತ್ತವೆ. ಧರ್ಮಸ್ಥಳದಲ್ಲಿ ದೌರ್ಜನ್ಯಕ್ಕೆ ಒಳಗಾದವರು, ಸಾವಿಗೀಡಾದವರೆಲ್ಲ ಹಿಂದೂ ಮಹಿಳೆಯರೇ ಆಗಿದ್ದಾರೆ. ಅವರ ಪರ ಧ್ವನಿ ಎತ್ತುವುದು ತಪ್ಪಾ’ ಎಂದು ಪ್ರಶ್ನಿಸಿದರು.

ಒಬ್ಬಳು ಮಹಿಳೆ ಮಾಡುವ ಹೋರಾಟ ಕಥೆಯಾಗುತ್ತದೆ. ಎಲ್ಲ ಮಹಿಳೆಯರು ಸೇರಿ ಹೋರಾಟ ಮಾಡಿದರೆ ಕ್ರಾಂತಿಯಾಗುತ್ತದೆ ಎಂದರು.

ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್‌ ಮಾತನಾಡಿ, ‘ನಟಿ ಶ್ರುತಿ ಹರಿಹರನ್‌ ತನಗಾದ ಕಿರುಕುಳದ ಬಗ್ಗೆ ದೂರಿದಾಗ ಅವರು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಮೋದಿ ಪರ ಇದ್ದಾರೆ. ಅದಕ್ಕಾಗಿ ಆರೋಪ ಮಾಡಲಾಗಿದೆ ಎಂದೆಲ್ಲ ಕೆಲವರು ಟೀಕಿಸಿದರು. ಹೆಣ್ಣುಮಗಳೊಬ್ಬಳು ತನಗೆ ಕಿರುಕುಳ ಆಗಿದೆ ಎಂದು ಹೇಳಿದರೆ ಅದಕ್ಕೆ ಮೋದಿಯನ್ನು ಯಾಕೆ ಎಳೆದು ತರುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

‘ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯ, ಕೊಲೆಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಯಬೇಕು. ಆ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ತಿಳಿಸಿದರು.

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ಸೇರಿದಂತೆ ಎಲ್ಲ ಪ್ರಕರಣಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ‘ಕೊಂದವರು ಯಾರು’ ಅಭಿಯಾನದಲ್ಲಿ 20 ಸಾವಿರಕ್ಕೂ ಅಧಿಕ ಸಹಿ ಸಂಗ್ರಹಿಸಲಾಗಿದೆ. ಸಹಿ ಮಾಡಿದವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ತಿಳಿಸಿದರು.

‘ಕೊಂದವರು ಯಾರು? ಕೃತಿಯನ್ನು ಜನಾರ್ಪಣೆ ಮಾಡಲಾಯಿತು. ಕೃಷಿ ತಜ್ಞೆ ವಿ. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಸ್ತ್ರೀವಾದಿ ಚಿಂತಕಿ ಮಧು ಭೂಷಣ್‌, ಬರಹಗಾರ್ತಿ ಚಂಪಾವತಿ, ಹೋರಾಟಗಾರರಾದ ಮಮತಾ, ಮಲ್ಲಿಗೆ ಸಿರಿಮನೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.