ADVERTISEMENT

ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಯ ವೇತನ ಬಾಕಿ; ಎರಡು ವಾರದೊಳಗೆ ಪಾವತಿಸಲು ಸಚಿವ ಸೂಚನೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ *ಮುಷ್ಕರ ನಿರ್ಧಾರ ಕೈಬಿಟ್ಟ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 16:33 IST
Last Updated 24 ಜೂನ್ 2023, 16:33 IST
ದಿನೇಶ್‌ ಗುಂಡೂರಾವ್
ದಿನೇಶ್‌ ಗುಂಡೂರಾವ್   

ಬೆಂಗಳೂರು: ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಬಾಕಿ ವೇತನವನ್ನು ಎರಡು ವಾರದೊಳಗೆ ಪಾವತಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಸಿಬ್ಬಂದಿ ಮುಷ್ಕರದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇಲ್ಲಿನ ಆರೋಗ್ಯ ಸೌಧದಲ್ಲಿ ಡಯಾಲಿಸಿಸ್ ಕೇಂದ್ರದ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.

‘ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯು ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ.‌ ಅಲ್ಲದೇ, ಹೆಚ್ಚುವರಿ ಭತ್ಯೆಗಳು ವರ್ಷದಿಂದ ಬಾಕಿಯಿದೆ. ಭವಿಷ್ಯನಿಧಿಯೂ ಪಾವತಿಯಾಗಿಲ್ಲ. ಸಮಸ್ಯೆ ನಿವಾರಣೆಯಾಗದಿದ್ದರೆ ಕಾರ್ಯ ಸ್ಥಗಿತಗೊಳಿಸಿ, ಮುಷ್ಕರ ಕೈಗೊಳ್ಳುವುದು ಅನಿವಾರ್ಯ’ ಎಂದು ಡಯಾಲಿಸಿಸ್ ಕೇಂದ್ರಗಳ ಪ್ರತಿನಿಧಿಗಳು ತಿಳಿಸಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ದಿನೇಶ್ ಗುಂಡೂರಾವ್, ‘ಡಯಾಲಿಸಿಸ್ ಕೇಂದ್ರಗಳಲ್ಲಿ ಸೇವೆ ಸ್ಥಗಿತ ಆಗಬಾರದು. ಸಂಸ್ಥೆಯ ಜತೆಗೆ ಮಾತುಕತೆ ನಡೆಸಿ, ಬಾಕಿ ಇರುವ ವೇತನ ಪಾವತಿಗೆ ಕ್ರಮವಹಿಸಲಾಗುವುದು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಂಡಿದ್ದೇನೆ. ಸಂಸ್ಥೆಯ ಗುತ್ತಿಗೆ ಮುಗಿದಿದ್ದರಿಂದ ವೇತನ ಪಾವತಿಯಲ್ಲಿ ಸಮಸ್ಯೆಯಾಗಿದೆ. ಈಗಿರುವ ಸಂಜೀವಿನಿ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದು ಹೇಳಿದರು.

‘ಈ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು. ಡಯಾಲಿಸಿಸ್ ಕೇಂದ್ರಗಳಲ್ಲಿ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗುವುದು’ ಎಂದು ಭರವಸೆ ನೀಡಿದರು.

‘ತಲಾ ₹ 2 ಸಾವಿರದಂತೆ ಡಿಸೆಂಬರ್‌ವರೆಗಿನ ಭತ್ಯೆಯನ್ನು ಕೊಡಿಸಲಾಗುವುದು. ಮೇ ಮತ್ತು ಜೂನ್ ತಿಂಗಳ ವೇತನ 15 ದಿನದೊಳಗೆ ಪಾವತಿಸಲಾಗುತ್ತದೆ. ಸಂಸ್ಥೆಯಿಂದ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಒದಗಿಸುವ ಬಗ್ಗೆಯೂ ಮಾತುಕಡೆ ನಡೆಸಲಾಗಿದೆ’ ಎಂದರು.

ಇದರಿಂದಾಗಿ ಮುಷ್ಕರ ನಿರ್ಧಾರ ಕೈಬಿಟ್ಟು, ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದಾಗಿ ಡಯಾಲಿಸಿಸ್ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.