ADVERTISEMENT

ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ: ವೇಣುಗೋಪಾಲ್‌

ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 20:15 IST
Last Updated 1 ಜೂನ್ 2022, 20:15 IST
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಪ್ರೊ.ಕೊಟ್ರೇಶ್, ಕುಲಸಚಿವ (ಮೌಲ್ಯಮಾಪನ) ದೇವರಾಜ್‌ ಮತ್ತು ಸಂಘದ ಅಧ್ಯಕ್ಷ ಶಿವಪ್ಪ, ರಂಗಧಾಮಯ್ಯ ಮತ್ತಿತರರು ಇದ್ದಾರೆ
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಪ್ರೊ.ಕೊಟ್ರೇಶ್, ಕುಲಸಚಿವ (ಮೌಲ್ಯಮಾಪನ) ದೇವರಾಜ್‌ ಮತ್ತು ಸಂಘದ ಅಧ್ಯಕ್ಷ ಶಿವಪ್ಪ, ರಂಗಧಾಮಯ್ಯ ಮತ್ತಿತರರು ಇದ್ದಾರೆ   

ಕೆಂಗೇರಿ: ‘ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲ ಆಡಳಿತಾತ್ಮಕ ನಿರ್ಧಾರಗಳನ್ನು ಕಾನೂನು ಚೌಕಟ್ಟಿನಲ್ಲಿಯೇ ತೆಗೆದುಕೊಂಡಿದ್ದೇನೆ. ವಿಶ್ವವಿದ್ಯಾಲಯ ಜತೆಗಿನ 47 ವರ್ಷಗಳ ಸುದೀರ್ಘ ಒಡನಾಟದಲ್ಲಿ ಯಾವುದೇ ಕಾನೂನು ಬಾಹಿರ ಕೆಲಸ ಕಾರ್ಯಗಳನ್ನು ಮಾಡಿಲ್ಲ’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಸ್ಪಷ್ಟಪಡಿಸಿದರು.

ಇದೇ ಜೂನ್‌ 10ರಂದು ನಿವೃತ್ತರಾಗುತ್ತಿರುವುದರಿಂದ ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ನುಡಿದಂತೆಯೇ ನಡೆದಿದ್ದೇನೆ. ವೈಯಕ್ತಿ ಲಾಭಕ್ಕಾಗಿ ಎಂದಿಗೂ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ. 49ನೇ ವಯಸ್ಸಿನಲ್ಲೇ ದೊರೆಯಬೇಕಿದ್ದ ಕುಲಪತಿ ಹುದ್ದೆ 63ನೇ ವಯಸ್ಸಿನಲ್ಲಿ ಒಲಿದು ಬಂತು. ಕೆಲವರ ಚಿತಾವಣೆಯಿಂದ ನಿವೃತ್ತಿಗೆ ಹತ್ತು ದಿನ ಬಾಕಿ ಉಳಿದಿರುವಾಗಲೂ ಕೋರ್ಟ್ ವ್ಯಾಜ್ಯದಲ್ಲಿ ತೊಡಗುವಂತಾಗಿದೆ. ನಾನು ಕಾನೂನು ಹೋರಾಟದಲ್ಲಿ ಸೋಲಬಹುದು. ಆದರೆ, ಎಲ್ಲ ಸಿಬ್ಬಂದಿಯ ಪ್ರೀತಿ ಅಭಿನಂದನೆ ಪಡೆಯುವ ಮೂಲಕ ಜಯಗಳಿಸಿದ್ದೇನೆ’ ಎಂದರು.

ADVERTISEMENT

‘ಹಲವು ಸಾಧನೆಗಳ ಬಳಿಕವೂ ಮುಂಬರುವ ಕುಲಪತಿಗಳ ಅವಧಿಯಲ್ಲಿ ಮಾತ್ರ ವಿಶ್ವವಿದ್ಯಾಲಯ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂಬ ಆಶಯ ಕೆಲವರಲ್ಲಿದೆ. ಅವರ ಇಚ್ಛೆ ಈಡೇರಲಿ" ಎಂದು ಕುಟುಕಿದರು.

‘ವಿಶ್ವವಿದ್ಯಾಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ನೌಕರರ ಕಾಯಂಗೊಳಿಸುವುದು ಸೇರಿದಂತೆ 250ಕ್ಕೂ ಹೆಚ್ಚು ಪ್ರಾಧ್ಯಾಪಕರಿಗೆ ಮುಂಬಡ್ತಿ, ವಿದ್ಯಾರ್ಥಿ ವೇತನ ಹೆಚ್ಚಳ, ಮಹಿಳಾ ಕೊಠಡಿ ನಿರ್ಮಾಣ, 11 ಹಾಸ್ಟೆಲ್ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ಸಾಧಿಸಲು ಸಾಧ್ಯವಾಯಿತು. ಕರಾರುವಕ್ಕಾದ ಕಾರ್ಯವೈಖರಿ ಹಾಗೂ ಇಚ್ಛಾಶಕ್ತಿ ಇದ್ದಾಗ ಎಲ್ಲ ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳುತ್ತವೆ’ ಎಂದರು.

ಕುಲಸಚಿವ ಪ್ರೊ.ಕೊಟ್ರೇಶ್ ಮಾತನಾಡಿ, ‘ಪ್ರೊ. ಕೆ.ಆರ್.ವೇಣುಗೋಪಾಲ್ ಅವರು ಎಂದಿಗೂ ಕಾನೂನು ಚೌಕಟ್ಟು ಮೀರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕಾನೂನಿನ ಅಡಿ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ನಿರಾಧಾರ ಆರೋಪಗಳು ಎಂದಿಗೂ ಸತ್ಯವಾಗುವುದಿಲ್ಲ. ಅತ್ಯಂತ ಸಂಯಮದಿಂದ ನಿಷ್ಕಲ್ಮಷವಾಗಿ ಸೇವೆ ಸಲ್ಲಿಸಿದ ಪ್ರೊ.ಕೆ.ಆರ್.ವೇಣುಗೋಪಾಲ್ ಎಲ್ಲರಿಗೂ ಮಾದರಿಯಾಗಲಿದ್ದಾರೆ’ ಎಂದರು.

ಕುಲಸಚಿವ (ಮೌಲ್ಯಮಾಪನ) ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.