ADVERTISEMENT

ಸೇನೆಯ ನಿವೃತ್ತ ಮಹಿಳಾ ಸಿಬ್ಬಂದಿಗೆ ₹ 1.20 ಕೋಟಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:38 IST
Last Updated 10 ನವೆಂಬರ್ 2019, 19:38 IST

ಬೆಂಗಳೂರು: ಸೇನೆಯ ನಿವೃತ್ತ ಮಹಿಳಾ ಸಿಬ್ಬಂದಿಯಿಂದ ₹1.20 ಕೋಟಿ ಪಡೆದು ವಂಚಿಸಿದ ಆರೋಪದಲ್ಲಿ ದಂಪತಿ ವಿರುದ್ಧ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆಂಟ್ ಥೋಮಸ್‍ ಟೌನ್ ನಿವಾಸಿಯಾದ ಮಹಿಳಾ ಸಿಬ್ಬಂದಿ ಬಿ.ಎಂ. ವಿಜಯಲಕ್ಷ್ಮೀ (69) ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕಾಶ್ ಮತ್ತು ಅವರ ಪತ್ನಿ ನಿವೇದಾ ವಿರುದ್ಧ ಪ್ರಕರಣ ದಾಖಲಾಗಿದೆ.

‘ಅವಿವಾಹಿತರಾಗಿರುವ ನಾನು, ನನ್ನ ಸಹೋದರಿ ಮತ್ತು ಸಹೋದರ ಶಿವಕುಮಾರ್ ಒಟ್ಟಿಗೆ ವಾಸಿಸುತ್ತಿದ್ದೇವೆ. ಎಂಟು ವರ್ಷಗಳ ಹಿಂದೆ ನನಗೆ ನಿವೇದಳ ಪರಿಚಯವಾಗಿತ್ತು. ನಮ್ಮ ಮನೆಯ ಬಳಿ ಬಂದು ಕಷ್ಟ ಸುಖ ಮಾತನಾಡುತ್ತಿದ್ದ ಆಕೆ, ಮೂರು ವರ್ಷಗಳಿಂದ ನಮ್ಮ ಕುಟುಂಬ ಸದಸ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು’

ADVERTISEMENT

‘2016ರಲ್ಲಿ ನನ್ನ ಮನೆಗೆ ಬಂದಿದ್ದ ಆಕೆಯ ಪತಿ ಪ್ರಕಾಶ್, ನಿವೇದ ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ನಿವೇದ ಕೆಲಸ ಮಾಡುತ್ತಿರುವ ಕಂಪನಿಯಿಂದ ಕೋಟ್ಯಂತರ ರೂಪಾಯಿ ಬರಬೇಕಿದೆ. ನ್ಯಾಯಾಲಯದ ಖರ್ಚಿಗೆ ಹಣ ಬೇಕಾಗಿದೆ ಎಂದಿದ್ದರು’.

‘ದಂಪತಿಯ ಮನವಿಯಂತೆ ನಿವೇದಾಳ ಹೆಸರಿನಲ್ಲಿರುವ ಕೆನರಾ ಬ್ಯಾಂಕಿನ ಖಾತೆಗೆ ಒಟ್ಟು ₹ 1.20 ಕೋಟಿ ಹಣ ಆರ್‍ಟಿಜಿಎಸ್ ಮಾಡಿದ್ದೆ. ಅಲ್ಲದೆ, ಕೈಯಲ್ಲಿ ಹಂತ ಹಂತವಾಗಿ ₹ 52 ಲಕ್ಷ ನೀಡಿದ್ದೇನೆ. ಹಣ ಹಿಂದಿರುಗಿಸುವಂತೆ ಹೇಳಿದಾಗ, ಕೊಡದೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ವಿಜಯಲಕ್ಷ್ಮೀ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.