ADVERTISEMENT

ಪ್ರತ್ಯೇಕ ಅಪಘಾತ: ಯುವಕ, ಮಹಿಳೆ ಸಾವು

ಚಿಕ್ಕಬಾಣಾವರ, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 15:56 IST
Last Updated 19 ಆಗಸ್ಟ್ 2024, 15:56 IST
<div class="paragraphs"><p>ಅಪಘಾತ –ಪ್ರಾತಿನಿಧಿಕ ಚಿತ್ರ</p></div>

ಅಪಘಾತ –ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಚಿಕ್ಕಬಾಣಾವರ ಹಾಗೂ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಯುವಕ ಹಾಗೂ ಮಹಿಳೆ ಮೃತಪಟ್ಟಿದ್ದಾರೆ.

ಚಿಕ್ಕಬಾಣಾವರದ ಕೆರೆಗುಡ್ಡದಹಳ್ಳಿ ರಸ್ತೆಯಲ್ಲಿ ಕ್ರೇನ್ ಹಾಗೂ ಆಟೊ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಆದರ್ಶ್‌ ಸಿಂಗ್‌ (17) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

‘ಆದರ್ಶ್‌ ಅವರ ಪೋಷಕರೂ ಅದೇ ಆಟೊದಲ್ಲಿ ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಟೊ ಚಾಲಕನ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಕ್ರೇನ್‌ ಚಾಲಕ ಪರಾರಿಯಾಗಿದ್ದು, ವಾಹನ ಜಪ್ತಿ ಮಾಡಲಾಗಿದೆ. ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಮಹಿಳೆ ಸಾವು

ಹಲಸೂರು ಗೇಟ್ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕ್ಯಾಂಟರ್‌ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಹೆಬ್ಬಾಳದ ದಾಸರಹಳ್ಳಿ ನಿವಾಸಿ ಸತ್ಯಪ್ರೇಮಾ(46) ಮೃತ ಮಹಿಳೆ. ಇವರ ಪತಿ ಬಿ.ಎಲ್.ಮೋಹನ್ ಗಾಯಗೊಂಡಿದ್ದಾರೆ.

ಪಾಲಿಕೆ ವೃತ್ತದ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಕ್ಯಾಂಟರ್ ವಾಹನ ಚಾಲಕ ಸೈಯದ್ ಬಾಬು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಸತ್ಯಪ್ರೇಮಾ– ಮೋಹನ್ ದಂಪತಿ ತಮ್ಮ ಪುತ್ರಿಯ ಹುಟ್ಟುಹಬ್ಬದ ಪ್ರಯುಕ್ತ ಖರೀದಿಗಾಗಿ ಮನೆಯಿಂದ ಕೆ.ಆರ್‌. ಮಾರುಕಟ್ಟೆ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಪಾಲಿಕೆ ವೃತ್ತದ ಬಸ್ ನಿಲ್ದಾಣದ ಬಳಿ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಈ ವೇಳೆ ಸತ್ಯಪ್ರೇಮಾ ತಲೆಗೆ ಗಂಭೀರ ಪೆಟ್ಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.