ADVERTISEMENT

ಡಿಜಿಟಲ್ ಅರೆಸ್ಟ್‌ | ಅಮೆರಿಕ, ಕೆನಡಾ ಪ್ರಜೆಗಳಿಗೆ ವಂಚನೆ: 16 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 22:26 IST
Last Updated 14 ಅಕ್ಟೋಬರ್ 2025, 22:26 IST
ಆರೋಪಿಗಳಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಾಧನಗಳು. 
ಆರೋಪಿಗಳಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಾಧನಗಳು.    

ಬೆಂಗಳೂರು: ಕಾಲ್ ಸೆಂಟರ್ ಕಚೇರಿ ತೆರೆದು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಅಮೆರಿಕ, ಕೆನಡಾ ದೇಶದ ಪ್ರಜೆಗಳನ್ನು ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಎಚ್‌.ಎಸ್‌.ಆರ್‌. ಲೇಔಟ್‌ ಠಾಣೆ ಪೊಲೀಸರು, ವಿವಿಧ ರಾಜ್ಯಗಳ 16 ಮಂದಿಯನ್ನು ಬಂಧಿಸಿದ್ದಾರೆ.

ಗುಜರಾತ್‌ನ ಮಾಧೇವ್ ಸಿಂಗ್ ರಾಥೋಡ್, ಮಹಾರಾಷ್ಟ್ರದ ಫ್ರಾನ್ಸಿಸ್ ಅಂಥೋನಿ, ಕಾರ್ತಿಕ್ ರಾಜು,  ಅರವಿಂದ್ ಪೂಜಾರಿ, ರೋಹನ್, ರಿಷಿತ್ ರಮೇಶ್, ಇಂದರ್ ಲಾಲ್ಮನಿ, ಮುಂಬೈನ ಸುನಿಲ್ ನಾಯ್ಡು, ಗುರುಪ್ರಸನ್ನ ಆಚಾರ್ಯ, ಮೇಘಾಲಯದ ಮಿನೋಟ್ ಕಂಕೈ, ಫಣಿ ಲೇಭಾ, ರೆಮಿಸನ್ ಬಾಮನ್,   ಎಲ್ಜಿಬಾ ಮೇರಿ, ಒಡಿಶಾದ ರಾಕೇಶ್ ಕುಮಾರ್ ಸಿಂಗ್, ಮಧ್ಯಪ್ರದೇಶದ ರಾಮಕೃಷ್ಣ ಸೋನಿ ಹಾಗೂ ಪಶ್ಚಿಮ ಬಂಗಾಳದ ಪ್ರಿಯಾಂಕಾ ಗುರುಂಗ್ (24) ಎಂಬುವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ 41 ಕಂಪ್ಯೂಟರ್, 40ಕ್ಕೂ ಹೆಚ್ಚು ವಿಜಿಎಸ್ ಕೇಬಲ್, 82 ಪವರ್ ಕೇಬಲ್, 21 ಲ್ಯಾನ್ ಕೇಬಲ್, 2 ದಾಖಲಾತಿ ಪುಸ್ತಕ, 4 ನೋಟ್‌ ಪುಸ್ತಕ, 25 ಮೊಬೈಲ್ ಪೋನ್, ಗುರುತಿನ ಚೀಟಿ, 1 ಕಂಪ್ಯೂಟರ್ ಡಿವೈಸ್, 4 ಡಿಲಿಂಕ್ ಸ್ವೀಚ್, 4 ರೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ಸೈಬರ್‌ ಅಪರಾಧ ಕೃತ್ಯಕ್ಕಾಗಿ ಠಾಣಾ ವ್ಯಾಪ್ತಿಯಲ್ಲಿ ‘ಸಿಬಿಟ್ಸ್‌ ಸಲ್ಯೂಷನ್‌ಸ್ ಪ್ರೈವೇಟ್ ಲಿಮಿಟೆಡ್‌’ ಎಂಬ ನಕಲಿ ಕಂಪನಿ ತೆರೆಯಲಾಗಿತ್ತು. ಕಂಪನಿಯಲ್ಲಿ ಹೊರ ರಾಜ್ಯದವರು ಕೆಲಸ ಮಾಡುತ್ತಿದ್ದರು. ಉದ್ಯೋಗಿಗಳಿಗೆ ಎಚ್‌.ಎಸ್‌.ಆರ್‌. ಲೇಔಟ್ ಮತ್ತು ಬಿಟಿಎಂ ಲೇಔಟ್‌ಗಳಲ್ಲಿ ವಾಸಕ್ಕೆ ಮನೆ, ಊಟದ ವ್ಯವಸ್ಥೆ ಮಾಡಲಾಗಿತ್ತು. ಇಂಟರ್ ನೆಟ್‌ ಮೂಲಕ ಕರೆ ಮಾಡಿ ಹೇಗೆ ವಂಚನೆ ಮಾಡಬೇಕು ಎಂಬುದರ ಕುರಿತು ಮೂರು ವಾರ ತರಬೇತಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ವಿದೇಶಿ ಪ್ರಜೆಗಳ ಬಗ್ಗೆ ಆನ್‌ಲೈನ್‌ಲ್ಲಿ ವಿಳಾಸ, ದೂರವಾಣಿ ಸಂಖ್ಯೆ, ಮೊಬೈಲ್ ನಂಬರ್ ಪಡೆದುಕೊಂಡು, ಅವರಿಗೆ ಕರೆ ಮಾಡಿ, ‘ನಿಮ್ಮ ಹೆಸರಿನಲ್ಲಿ ಮಾದಕ ವಸ್ತು ಸಾಗಣೆ ಹಾಗೂ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ’ ಎಂದು ಬೆದರಿಸುತ್ತಿದ್ದರು. ತನಿಖಾ ಸಂಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳೆಂದು ಹೇಳಿ, ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಕೆಲವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಖಾತೆಯಲ್ಲಿದ್ದ ಹಣವನ್ನು ತನಿಖಾ ಸಂಸ್ಥೆ ಬ್ಯಾಂಕ್ ಖಾತೆಗೆ ಜಮೆ ಮಾಡಿ, ಪುನಃ ವರ್ಗಾವಣೆ ಮಾಡುವ ಭರವಸೆ ನೀಡಿ ವಂಚಿಸಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ವಂಚನೆಗೆ ಒಳಗಾದವರು ಈವರೆಗೂ ದೂರು ನೀಡಿಲ್ಲ. ಇವರಿಗೆ ತರಬೇತಿ ನೀಡಿದವರು ಯಾರು? ಕಚೇರಿಯ ಮಾಲೀಕ? ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ಸೈಬರ್ ವಂಚಕರ ಜಾಲ ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಿದೆ. ಸಂಪೂರ್ಣ ತನಿಖೆ ಕೈಗೊಳ್ಳಲು ವಿಶೇಷ ತಂಡ ರಚನೆ ಮಾಡಲಾಗಿದೆ. ಮೂಲ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.