ADVERTISEMENT

ರಂಗಭೂಮಿ ಚರಿತ್ರೆ ಡಿಜಿಟಲೀಕರಣ ನನೆಗುದಿಗೆ

ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ ಯೋಜನೆ l ಅನುದಾನದ ಕೊರತೆ ಕಾರಣ

ವರುಣ ಹೆಗಡೆ
Published 23 ಜುಲೈ 2022, 21:10 IST
Last Updated 23 ಜುಲೈ 2022, 21:10 IST
ಪ್ರೊ.ಆರ್. ಭೀಮಸೇನ
ಪ್ರೊ.ಆರ್. ಭೀಮಸೇನ   

ಬೆಂಗಳೂರು: ಹರಿದು ಹಂಚಿ ಹೋಗಿದ್ದ ರಂಗಭೂಮಿಯ ಇತಿಹಾಸವನ್ನು ಡಿಜಿಟ ಲೀಕರಣಗೊಳಿಸುವ ಕರ್ನಾಟಕ ನಾಟಕ ಅಕಾಡೆಮಿಯ ಕಾರ್ಯ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಡಿಜಿಟಲ್ ವೇದಿಕೆಯಲ್ಲಿ ರಂಗಭೂಮಿ ಚರಿತ್ರೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ದೂರವಾಗಿದೆ.

ರಂಗಭೂಮಿ ಬೆಳೆದ ಬಂದ ಬಗೆ, ರಂಗ ತಂಡಗಳು, ರಂಗ ಸಾಹಿತ್ಯ, ಅಪರೂಪದ ಛಾಯಾಚಿತ್ರಗಳು ಸೇರಿದಂತೆ ರಂಗಭೂಮಿಗೆ ಸಂಬಂಧಿಸಿದ ವಿವಿಧ ವಿಷಯ ವಸ್ತುಗಳನ್ನು ಡಿಜಿಟಲೀಕರಣಗೊಳಿಸಲು ಅಕಾಡೆಮಿ 2018ರಲ್ಲಿ ಯೋಜನೆ ರೂಪಿಸಿತ್ತು. ಮೂರು ವರ್ಷಗಳಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸಲು ಕಾರ್ಯಯೋಜನೆ ರೂಪಿಸಿದ್ದ ಅಕಾಡೆಮಿಯ ಅಂದಿನ ಅಧ್ಯಕ್ಷ ಜೆ. ಲೋಕೇಶ್, ರಂಗಭೂಮಿಗೆ ಸಂಬಂಧಿ ಸಿದ ವಿಷಯ ವಸ್ತುಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂ ಭಿಸಿದ್ದರು. ಸರ್ಕಾರವು 2019ರಲ್ಲಿ ಅಕಾಡೆಮಿಗಳ ಅಧ್ಯಕ್ಷರ ನೇಮಕಾತಿ ಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅನುದಾನದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ಕಾರ್ಯಕಾರಿ ಸಮಿತಿ ಡಿಜಿಟಲೀಕರಣಕ್ಕೆ ಆಸಕ್ತಿ ತಾಳದಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.

ಈ ಯೋಜನೆಗೆ ಒಟ್ಟು ₹ 20 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ₹ 10 ಲಕ್ಷ ಮೊತ್ತದಲ್ಲಿ ಡಿಜಿಟಲೀಕರಣಗೊಳಿಸಲು ಬೇಕಾದ ಸಲಕರಣೆಗಳನ್ನು ಖರೀದಿಸಲಾಗಿತ್ತು. ಸಮಗ್ರ ನಾಟಕ ಚರಿತ್ರೆ ಸಂಗ್ರಹಿಸಲು ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು. ವಿವಿಧ ನಾಟಕ ಕಂಪನಿಗಳು, ರಂಗಭೂಮಿ ತಜ್ಞರು ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆಗಳಿಂದ ರಂಗಭೂಮಿಗೆ ಸಂಬಂಧಿಸಿದ ವಿಷಯ ವಸ್ತುಗಳನ್ನು ಕೇಂದ್ರ ಕಚೇರಿಗೆ ತರಿಸಿಕೊಂಡು, ಡಿಜಿಟಲೀಕರಣ ಪ್ರಕ್ರಿಯೆ ನಡೆಸಲಾಗಿತ್ತು. ಯೋಜನೆ ಪೂರ್ಣಗೊಳ್ಳುವ ಮೊದಲೇ ಕಾರ್ಯಕಾರಿ ಸಮಿತಿ ವಿಸರ್ಜನೆಗೊಂಡಿದ್ದರಿಂದ ಸಂಗ್ರಹಿಸಿದ್ದ ವಿಷಯ ವಸ್ತುಗಳು ಹಾಗೇ ಉಳಿದಿವೆ

ADVERTISEMENT

ವೆಬ್‌ಸೈಟ್‌ನಲ್ಲಿ ಅಳವಡಿಕೆ: ಡಿಜಿಟ ಲೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವನ್ನು ಅಕಾಡೆಮಿಯ ವೆಬ್‌ ಸೈಟ್‌ನಲ್ಲಿ ಅಳವಡಿಸುವುದೂ ಯೋಜ ನೆಯ ಭಾಗವಾಗಿತ್ತು. ರಂಗ ಭೂಮಿಗೆ ಸಂಬಂಧಿಸಿದ 150 ಸಾಕ್ಷ್ಯ ಚಿತ್ರಗಳನ್ನು ಸಿದ್ಧಪಡಿಸಲಾಗಿತ್ತು. 2020ರಲ್ಲಿ ಕೋವಿಡ್‌ ಬಳಿಕ ಅಕಾಡೆಮಿಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಅನುದಾನಕ್ಕೆ ಕತ್ತರಿ ಹಾಕ ಲಾಗಿತ್ತು. ಇದರಿಂದಾಗಿ ವಾರ್ಷಿಕ ಅನು ದಾನವನ್ನು ಈ ಯೋಜನೆಗೆ ಬಳಸಲು ಹಾಲಿ ಕಾರ್ಯಕಾರಿ ಸಮಿತಿ ಆಸಕ್ತಿ ತೋರಿಲ್ಲ.

‘ರಂಗಭೂಮಿಯ ಸಮಗ್ರ ಇತಿಹಾಸವನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಹಾಲಿ ಕಾರ್ಯಕಾರಿ ಸಮಿತಿ ಆಸಕ್ತಿ ತೋರುತ್ತಿಲ್ಲ. ಡಿಜಿಟಲೀಕರಣಗೊಳಿಸಲಾದ ವಿಷಯ ವಸ್ತುಗಳನ್ನು ಪರಿಷ್ಕರಿಸಿ, ವೆಬ್‌ಸೈಟ್‌ಗೆ ಅಳವಡಿಸುವ ಪ್ರಕ್ರಿಯೆಯೂ ನಡೆದಿಲ್ಲ. ವೃತ್ತಿ ಹಾಗೂ ಪೌರಾಣಿಕ ರಂಗಭೂಮಿಗೆ ಸಂಬಂಧಿಸಿದ ಸಾವಿರ ನಾಟಕ ಪುಸ್ತಕಗಳು ಡಿಜಿಟಲೀಕರಣಗೊಂಡಿದ್ದವು. ಹವ್ಯಾಸಿ ರಂಗಭೂಮಿಯ ಕೆಲ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಕೆಲಸ ಬಾಕಿಯಿತ್ತು’ ಎಂದು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.