ADVERTISEMENT

70 ವರ್ಷ ಮೇಲ್ಪಟ್ಟವರಿಗೆ ‘ಆಯುಷ್ಮಾನ್’ ಗೊಂದಲ

ಅನುದಾನದ ಸಮಸ್ಯೆಯಿಂದ ರಾಜ್ಯದಲ್ಲಿ ಅನುಷ್ಠಾನಗೊಳ್ಳದ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:33 IST
Last Updated 11 ಜನವರಿ 2025, 14:33 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯವಾಗುವಂತೆ ಕಳೆದ ವರ್ಷ ಜಾರಿ ಮಾಡಿದ್ದ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯು (ಎಬಿ–ಪಿಎಂಜೆಎವೈ) ಅನುದಾನದ ಗೊಂದಲದಿಂದ ರಾಜ್ಯದಲ್ಲಿ ಜಾರಿಯಾಗಿಲ್ಲ. 

ರಾಜ್ಯದಲ್ಲಿ ಸದ್ಯ ಎಬಿ–ಪಿಎಂಜೆಎವೈ–ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ, 70 ವರ್ಷ ಮೇಲ್ಪಟ್ಟವರು ಸೇರಿ ಎಲ್ಲ ವಯೋಮಾನದವರಿಗೆ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಎಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಯೋಜನೆಯಡಿ ಚಿಕಿತ್ಸಾ ವೆಚ್ಚದ ಶೇ 30 ರಷ್ಟು ಪಾವತಿಸಲಾಗುತ್ತಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ನಿರ್ವಹಿಸುತ್ತಿದೆ.

ಕೇಂದ್ರ ಸರ್ಕಾರವು ಕಳೆದ ಅಕ್ಟೋಬರ್‌ನಿಂದ ಎಬಿ–ಪಿಎಂಜೆಎವೈ ಅಡಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದೆ. ಆದರೆ, ಯೋಜನೆಯಡಿ ನಿಗದಿತ ಅನುದಾನದ ಖಚಿತತೆ ಇಲ್ಲದ ಕಾರಣ ರಾಜ್ಯ ಸರ್ಕಾರ ಇನ್ನೂ ಅನುಷ್ಠಾನ ಮಾಡಿಲ್ಲ. 

ADVERTISEMENT

ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಕಳೆದ ನ.27ರಂದು ಪತ್ರ ಬರೆದಿದ್ದರು. ಅದಕ್ಕೆ ಉತ್ತರ ಬಾರದೇ ಇದ್ದುದರಿಂದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗೊಂದಲಕ್ಕೆ ಒಳಗಾಗಿದೆ. ಇದರಿಂದ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ರಾಜ್ಯದಲ್ಲಿ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯದಂತಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಎಬಿ–ಪಿಎಂಜೆಎವೈಗೆ ಸಂಬಂಧಿಸಿ ಗೊಂದಲಗಳಿವೆ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಯೋಜನೆ ಅನುಷ್ಠಾನವಾಗಿಲ್ಲ. ಈ ಹಿಂದೆ ಜಾರಿಮಾಡಿದ್ದ ಈ ಯೋಜನೆಯಡಿ ಶೇ 60ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಹಾಗೂ ಶೇ 40 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಆದರೆ, ನಮ್ಮ ರಾಜ್ಯದಲ್ಲಿ ಅನುಷ್ಠಾನವಾಗಿರುವ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಶೇ 25 ರಷ್ಟು ಹಾಗೂ ರಾಜ್ಯ ಸರ್ಕಾರವು ಶೇ 75 ರಷ್ಟು ಅನುದಾನ ಭರಿಸುತ್ತಿದೆ. ಇದರಿಂದಾಗಿ ಹೊಸ ಯೋಜನೆಯ ಅನುದಾನದ ಬಗ್ಗೆ ಅನುಮಾನವಿದೆ’ ಎಂದರು.

70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವ ಯೋಜನೆ ಜಾರಿಗೆ ಉತ್ಸುಕರಾಗಿದ್ದೇವೆ. ಆದರೆ ಯಾವ ಪ್ರಕಾರ ಮತ್ತು ಎಷ್ಟು ಹಣ ಬರುತ್ತದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.
–ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಚಿಕಿತ್ಸೆಗೆ ₹ 169 ಕೋಟಿ ವೆಚ್ಚ
‘ಈಗಾಗಲೆ ಜಾರಿಯಲ್ಲಿರುವ ಎಬಿ–ಪಿಎಂಜೆಎವೈ ಅಡಿ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬದ 70 ವರ್ಷ ಮೇಲ್ಪಟ್ಟ ಸದಸ್ಯರಿಗೆ 2023–24ನೇ ಸಾಲಿನಲ್ಲಿ ಒಟ್ಟು ₹ 169 ಕೋಟಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ’ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ‘ಯೋಜನೆಗೆ ಸಂಬಂಧಿಸಿದಂತೆ ಹೆಸರು ಕೇಂದ್ರ ಸರ್ಕಾರದ್ದು ಹಣ ರಾಜ್ಯ ಸರ್ಕಾರದ್ದು ಆಗಬಾರದು. ಯೋಜನೆಯಡಿ ಚಿಕಿತ್ಸೆಗೆ ಸಂಬಂಧಿಸಿದಂತೆ 70 ವರ್ಷ ಮೇಲ್ಪಟ್ಟವರು ಯಾವುದೇ ಕಾರ್ಡ್‌ಗಳನ್ನು ಹೊಸದಾಗಿ ಪಡೆಯಬೇಕಿರುವುದಿಲ್ಲ. ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಇದ್ದರೆ ಸಾಕಾಗುತ್ತದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.