ಬೆಂಗಳೂರು: ವಡ್ಡರಹಳ್ಳಿ ರೈಲ್ವೆ ಯಾರ್ಡ್‌ನಲ್ಲಿ ಹಳಿ ತಪ್ಪಿದ ಬೋಗಿ ಮಗುಚಿ ಬಿಳುವಂತಾಗಿತ್ತು. ಕೂಡಲೇ ತುರ್ತು ಸೈರನ್ ಮೊಳಗಿತು. ನಿಯಂತ್ರಣ ಕಚೇರಿಯಿಂದ ಅಪಘಾತದ ಬಗ್ಗೆ ಸಂದೇಶ ರವಾನೆಯಾಯಿತು. ವಿವಿಧ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು.
ವಿಪತ್ತು ಸಂದರ್ಭದಲ್ಲಿ ಸನ್ನದ್ಧರಾಗುವುದು ಹೇಗೆ ಎಂಬುದರ ಬಗ್ಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್) 10ನೇ ಬೆಟಾಲಿಯನ್ ಮತ್ತು ಇತರ ಸಂಸ್ಥೆಗಳ ಸದಸ್ಯರು ಗುರುವಾರ ನೀಡಿದ ಅಣಕು ಪ್ರದರ್ಶನದ ದೃಶ್ಯಗಳು ಇವು.
10ನೇ ಬೆಟಾಲಿಯನ್‌ನ ಉಪ ಕಮಾಂಡೆಂಟ್ ದಿಲ್ಬಾಗ್ ಸಿಂಗ್ ನೇತೃತ್ವದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ 27 ಮಂದಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್), ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಪಡೆ, ಅಗ್ನಿಶಾಮಕ ಸೇವೆಗಳು, ಸರ್ಕಾರಿ ಆಸ್ಪತ್ರೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರೈಲ್ವೆಯ ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್, ವಿದ್ಯುತ್, ರೈಲ್ವೆ ರಕ್ಷಣಾ ದಳ, ಪರಿಚಾಲನಾ ಮತ್ತು ವಾಣಿಜ್ಯ ಇಲಾಖೆ ಸಿಬ್ಬಂದಿ ಸಹಕಾರ ನೀಡಿದರು.
ನೈರುತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ. ರಾಮಕೃಷ್ಣ ಮಾತನಾಡಿ, ‘ರಕ್ಷಣಾ ಕಾರ್ಯಾಚರಣೆಯ ಅಭ್ಯಾಸವನ್ನು ಸಮನ್ವಯತೆಯಿಂದ ಮಾಡಬೇಕು. ವಿಪತ್ತು ನಿರ್ವಹಣೆಗಾಗಿ ಪ್ರತಿ ಜಿಲ್ಲೆಯಲ್ಲಿ ‘ಆಪತ್‌ಮಿತ್ರ’ ಸ್ವಯಂಸೇವಕರನ್ನು ನೇಮಿಸಿಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.
ಡೀಸೆಲ್ ಮತ್ತು ವಿಪತ್ತು ನಿರ್ವಹಣೆ ವಿಭಾಗದ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಬಾಲಸುಂದರ್ ಪಿ., ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿಯಾ, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟರಾಮಯ್ಯ, ಗೃಹರಕ್ಷಕ ದಳದ ಉಪ ಕಮಾಂಡೆಂಟ್ ಮಹಾದೇವ ಮೂರ್ತಿ, ಅಗ್ನಿಶಾಮಕ ಸೇವೆಗಳ ಕಮಾಂಡಿಂಗ್ ಅಧಿಕಾರಿ ಗೌತಮ್ ಎಚ್.ಜಿ., ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ ಸ್ಮಿತಾ ಪ್ರಿಯದರ್ಶಿನಿ, ಎಸ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಅನುಕುಮಾರ್, ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಸುದರ್ಶನ್ ಭಟ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.