ADVERTISEMENT

ಸಂಸ್ಕರಿಸದ ನೀರನ್ನು ಕೆರೆಗಳಿಗೆ ಹರಿಸುವುದು ಅಪಾಯ: ಸಂಸದ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:32 IST
Last Updated 4 ನವೆಂಬರ್ 2025, 15:32 IST
ಶೃಂಗಸಭೆಯಲ್ಲಿ ಸಿಎಸ್‌ಡಿ ಅಧ್ಯಕ್ಷ ಎ. ರವೀಂದ್ರ ಮತ್ತು ಸಂಸದ ಡಾ. ಸಿ. ಎನ್. ಮಂಜುನಾಥ್ ಸಮಾಲೋಚನೆಯಲ್ಲಿ ತೊಡಗಿದ್ದರು. ಉಪೇಂದ್ರ ತ್ರಿಪಾಠಿ, ಶ್ರೀನಿವಾಸುಲು ಮತ್ತು ಜೈರಾಜ್ ಇದ್ದರು. ಪ್ರಜಾವಾಣಿ ಚಿತ್ರ
ಶೃಂಗಸಭೆಯಲ್ಲಿ ಸಿಎಸ್‌ಡಿ ಅಧ್ಯಕ್ಷ ಎ. ರವೀಂದ್ರ ಮತ್ತು ಸಂಸದ ಡಾ. ಸಿ. ಎನ್. ಮಂಜುನಾಥ್ ಸಮಾಲೋಚನೆಯಲ್ಲಿ ತೊಡಗಿದ್ದರು. ಉಪೇಂದ್ರ ತ್ರಿಪಾಠಿ, ಶ್ರೀನಿವಾಸುಲು ಮತ್ತು ಜೈರಾಜ್ ಇದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೆಂಗಳೂರಿನ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಿಸದೇ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಆನೇಕಲ್‌ ಭಾಗದ ಕೆರೆಗಳಿಗೆ ಹರಿಸುತ್ತಿರುವುದರಿಂದ ಮಾಲಿನ್ಯದ ಜತೆಗೆ ಆ ಭಾಗದ ಜನರಲ್ಲಿ ರೋಗಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

ಗ್ರೀನ್ ಸ್ಕೀಲ್ಸ್ ಅಕಾಡೆಮಿ ಹಾಗೂ ಸೆಂಟರ್ ಫಾರ್ ಸಸ್ಟೆನೇಬಲ್ ಡೆವಲಪ್‌ಮೆಂಟ್ (ಸಿಎಸ್‌ಡಿ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 3ನೇ ವಾರ್ಷಿಕ ಸುಸ್ಥಿರ ನಾಯಕತ್ವ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

‘ಕೊಳಚೆ ನೀರನ್ನು ಸಂಪೂರ್ಣ ಸಂಸ್ಕರಣೆ ಮಾಡಿದ ಬಳಿಕವೇ ಕೆರೆಗಳಿಗೆ ಇಲ್ಲವೇ ಅಂತರ್ಜಲ ವೃದ್ದಿಗೆ ಬಳಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ರೂಪಿಸಿದೆ. ಆದರೆ, ಸರಿಯಾಗಿ ಸಂಸ್ಕರಣೆ ಮಾಡದೇ ನೀರು ಹರಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಭಾಗದಲ್ಲಿ ನೀರಿನ ರುಚಿ, ವಾಸನೆ ಕೂಡ ಭಿನ್ನವಾಗಿದೆ. ಎಳನೀರು ಕೂಡ ಭಿನ್ನರುಚಿಗೆ ತಿರುಗಿದೆ. ಇದರ ಬಳಕೆ ಕ್ಯಾನ್ಸರ್‌, ಚರ್ಮರೋಗ ಉಲ್ಬಣಕ್ಕೂ ದಾರಿ ಮಾಡಿಕೊಡಬಹುದು’ ಎಂದು ಹೇಳಿದರು.

ADVERTISEMENT

‘ನಗರ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಮಿತಿ ಮೀರುತ್ತಿದೆ. ಅತಿಯಾದ ಕಾಮಗಾರಿಗಳು, ವಾಹನಗಳ ದಟ್ಟಣೆ, ಹಸಿರು ಪ್ರಮಾಣದಲ್ಲಿ ಇಳಿಕೆಯಿಂದಾಗಿ ಮಾಲಿನ್ಯ ಹೆಚ್ಚಿ ಇದರ ಪರಿಣಾಮ ಜನರ ಮೇಲೆ ಬೀರುತ್ತಿದೆ. ಧೂಳಿನ ಕಣಗಳು ದೇಹದೊಳಕ್ಕೆ ಸೇರಿ ಇದು ಹೃದಯಾಘಾತ, ಪಾರ್ಶ್ಚವಾಯು, ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಹೆಚ್ಚಳಕ್ಕೂ ದಾರಿ ಮಾಡಿಕೊಡುತ್ತಿದೆ’ ಎಂದು ತಿಳಿಸಿದರು.

‘ಪ್ರತಿಯೊಬ್ಬರೂ ಶುದ್ದ ಆಹಾರ, ಗಾಳಿ, ನೀರು ಪಡೆಯಲೇಬೇಕು. ಆಗ ಮಾತ್ರ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ₹26,500 ಕೋಟಿ ಮೀಸಲಿರಿಸಿದೆ. ಚೀನಾದಂತೆ ಭಾರತದಲ್ಲಿ ಕೂಡ ಇದಕ್ಕಾಗಿ ಸ್ಪಷ್ಟವಾದ ನೀತಿ ಜಾರಿ ಮಾಡಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಎ.ರವೀಂದ್ರ ಮಾತನಾಡಿ, ‘ಇಂದಿನ ಯುವ ಪೀಳಿಗೆ ಮಾತ್ರವಲ್ಲದೇ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಶುದ್ಧ ಗಾಳಿ, ನೀರು ಮತ್ತು ಆಹಾರ ನೀಡಲು ಸಾಮೂಹಿಕ ಪ್ರಯತ್ನ ಅತ್ಯಗತ್ಯ’ ಎಂದರು.

ನಿವೃತ್ತ ಐಎಎಸ್ ಅಧಿಕಾರಿಗಳಾದ ಉಪೇಂದ್ರ ತ್ರಿಪಾಠಿ, ಕೆ.ಜೈರಾಜ್‌, ಸಿಎಸ್‌ಡಿ ನಿರ್ದೇಶಕ ಆರ್.ಶ್ರೀನಿವಾಸ್ ಹಾಜರಿದ್ದರು.

ಬಳಿಕ ಸುಸ್ಥಿರ ಅಭಿವೃದ್ಧಿ ಸಾಧಿಸಲು ಹೊಸ ತಂತ್ರಜ್ಞಾನ ಹಾಗೂ ವಿನೂತನ ಆವಿಷ್ಕಾರಗಳ ಅಳವಡಿಕೆ ಕುರಿತು ಸಂವಾದ ನಡೆಯಿತು.

ಅರಣ್ಯ ನಾಶ ತಗ್ಗಿಸಿ: ಶ್ರೀನಿವಾಸುಲು

ಪರಿಸರ ಇಲಾಖೆ ‍ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮಾತನಾಡಿ‘ನಮ್ಮ ಎಲ್ಲಾ ಬೇಡಿಕೆಗಳ ತಾಯಿಯಂತಿರುವ ಅರಣ್ಯದ ನಾಶ ಮಾತ್ರ ನಿರಂತರವಾಗಿ ನಡೆದೇ ಇದೆ. ಆಯುರ್ವೇದಕ್ಕೆ ಬೇಕಾದ ವಸ್ತುಗಳಿಗೆ ಅರಣ್ಯವೇ ಮೂಲವಾಗಿರುವಾಗ ಅರಣ್ಯ ನಾಶ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು. ‘ಪರಿಸರ ನೆಲೆಯಲ್ಲಿ ನಮ್ಮ ಯೋಚನಾ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗಿದೆ. ಇಂಗಾಲ ಪ್ರಮಾಣ ಶೂನ್ಯಗೊಂಡರೆ ಮಾತ್ರ ಪರಿಸರ ಮೇಲಿನ ಹಾನಿ ಪ್ರಮಾಣವನ್ನು ತಗ್ಗಿಸಬಹುದು. ಕೋವಿಡ್‌ ನಂತರವಂತೂ ಪ್ರವಾಸೋದ್ಯಮ ಎನ್ನುವುದು ಹೆಚ್ಚು ಬೆಳೆಯುತ್ತಿರುವುದು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.