ಬೆಂಗಳೂರು: ‘ಲಸಿಕೆ ಹಂಚಿಕೆಯಲ್ಲೂ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಈ ಧೋರಣೆ ಖಂಡಿಸಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಸೋಮವಾರ ಅಥವಾ ಮಂಗಳವಾರ ಧರಣಿ ನಡೆಸುತ್ತೇನೆ’ ಎಂದು ಶಾಸಕ ಆರ್.ಮಂಜುನಾಥ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’3–4 ಲಕ್ಷ ಜನಸಂಖ್ಯೆ ಇರುವ ಕ್ಷೇತ್ರಗಳಿಗೆ ನಿತ್ಯ 3 ಸಾವಿರದಿಂದ 4 ಸಾವಿರ ಡೋಸ್ ಹಂಚಿಕೆ ಮಾಡಲಾಗುತ್ತಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ 8 ಲಕ್ಷ ಜನರು ಇದ್ದು, 700–800 ಡೋಸ್ ಮಾತ್ರ ನೀಡಲಾಗುತ್ತಿದೆ‘ ಎಂದು ದೂರಿದರು.
‘ಈ ಹಿಂದೆ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಿದ್ದರು. ಆಹಾರ ಕಿಟ್ ವಿತರಣೆಯಲ್ಲಿ ಸಹ ರಾಜಕಾರಣ ಮಾಡಿದ್ದರು. 110 ಹಳ್ಳಿಗಳ ಅಭಿವೃದ್ಧಿಗೆ ₹1000 ಕೋಟಿ ಮೀಸಲಿಡಲಾಗಿದ್ದು, ನನ್ನ ಕ್ಷೇತ್ರಕ್ಕೆ ₹25 ಕೋಟಿ ಮಾತ್ರ ಹಂಚಿಕೆ ಮಾಡಲಾಗಿದೆ. ನನ್ನ ಕ್ಷೇತ್ರ ಪಾಕಿಸ್ತಾನದಲ್ಲಿ ಇದೆಯಾ’ ಎಂದು ಅವರು ಪ್ರಶ್ನಿಸಿದರು.
’ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆಗಳ ಸಂಖ್ಯೆಯನ್ನು ಸರ್ಕಾರ ಕಡಿಮೆ ಮಾಡುತ್ತಿದೆ. ಆ್ಯಂಟಿಜೆನ್ ಪರೀಕ್ಷೆಯನ್ನೇ ನಡೆಸುತ್ತಿಲ್ಲ. ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಬರಲು 3–4 ದಿನಗಳು ಬೇಕು. ಇದರಿಂದಾಗಿ, ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಸಾಯುತ್ತಿದ್ದಾರೆ‘ ಎಂದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ’ಕೋವಿಡ್ ರೋಗಿಗಳಿಗೆ ನೆರವು ನೀಡುವ ಹಾಗೂ ಲಸಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಶಾಸಕರು ಆಧಾರರಹಿತ ಆರೋಪ ಮಾಡಿದ್ದಾರೆ‘ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.