ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST
   

ಬೆಂಗಳೂರು: ನಗರ ಜಿಲ್ಲೆಯ ಒಟ್ಟು 80 ಗ್ರಾಮ ಪಂಚಾಯಿತಿಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಒಟ್ಟು 1,376 ಸ್ಥಾನಗಳಿಗೆ 3,368 ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಅವರ ಭವಿಷ್ಯ ಬುಧವಾರ ಬಹಿರಂಗವಾಗಲಿದೆ.

ಉತ್ತರ ತಾಲ್ಲೂಕಿನ ಮತ ಎಣಿಕೆ ದಾಸರಹಳ್ಳಿಯ ಕಾಳಹಸ್ತಿನಗರದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ, ಯಲಹಂಕ ತಾಲ್ಲೂಕಿನ ಮತ ಎಣಿಕೆ ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ, ದಕ್ಷಿಣ ತಾಲ್ಲೂಕಿನ ಎಣಿಕೆ ಕೆಂಗೇರಿಯ ಆರ್‌.ವಿ. ಎಂಜಿನಿಯರಿಂಗ್ ಕಾಲೇಜು, ‍ಪೂರ್ವ ತಾಲ್ಲೂಕಿನ ಎಣಿಕೆ ಕೆ.ಆರ್.ಪುರದ ಐಟಿಐ ವಿದ್ಯಾಮಂದಿರ, ಆನೇಕಲ್ ತಾಲ್ಲೂಕಿನ ಎಣಿಕೆ ಎ.ಎಸ್.ಬಿ. ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ADVERTISEMENT

ಎಣಿಕೆಗೆ 236 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, 944 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಎಣಿಕೆ ಕಾರ್ಯ ತಡವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 306 ಸ್ಥಾನಗಳಿದ್ದು, ಅವುಗಳಲ್ಲಿ 9 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 887 ಮಂದಿ ಕಣದಲ್ಲಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ 244 ಸ್ಥಾನಗಳಿದ್ದು, 18 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 626 ಮಂದಿ ಕಣದಲ್ಲಿ ಉಳಿದಿದ್ದಾರೆ.

ಆನೇಕಲ್ ತಾಲ್ಲೂಕಿನಲ್ಲಿ 682 ಸ್ಥಾನಗಳಿದ್ದು, 9 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. 79 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 1,855 ಮಂದಿ ಚುನಾವಣೆ ಎದುರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.