ADVERTISEMENT

ಬೆಂಗಳೂರು: ಜಿಲ್ಲಾಧಿಕಾರಿ ಬಂಗಲೆಯ ನಿವೇಶನವೇ ಒತ್ತುವರಿ!

₹ 50 ಕೋಟಿ ಮೌಲ್ಯದ 23 ಗುಂಟೆ ಜಮೀನಿನಲ್ಲಿ 15 ಅಕ್ರಮ ಕಟ್ಟಡ

ವಿ.ಎಸ್.ಸುಬ್ರಹ್ಮಣ್ಯ
Published 12 ಏಪ್ರಿಲ್ 2025, 0:30 IST
Last Updated 12 ಏಪ್ರಿಲ್ 2025, 0:30 IST
ಜಿ. ಜಗದೀಶ
ಜಿ. ಜಗದೀಶ   

ಬೆಂಗಳೂರು: ನಗರದ ನಂದಿನಿ ಬಡಾವಣೆಯ ಸರಸ್ವತಿಪುರದಲ್ಲಿ ಜಾರಕಬಂಡೆ ಕಾವಲ್‌ ಗ್ರಾಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಸತಿ ಗೃಹ ನಿರ್ಮಾಣಕ್ಕಾಗಿ ಕಾಯ್ದಿರಿಸಿದ್ದ ಸುಮಾರು ₹50 ಕೋಟಿ ಮೌಲ್ಯದ 23 ಗುಂಟೆ ವಿಸ್ತೀರ್ಣದ ನಿವೇಶನದ ಬಹುಭಾಗ ಎರಡನೇ ಬಾರಿಗೆ ಒತ್ತುವರಿಯಾಗಿದೆ.

ಯಲಹಂಕ ತಾಲ್ಲೂಕಿನ ಯಲಹಂಕ ಹೋಬಳಿಯ ಜೆ.ಬಿ. ಕಾವಲ್‌ ಗ್ರಾಮದ ಸರ್ವೆ ನಂಬರ್‌ 1ರಲ್ಲಿ ಬ್ಲಾಕ್‌ 13ರಲ್ಲಿನ 23 ಗುಂಟೆ ಜಮೀನಿನಲ್ಲಿನ ಒತ್ತುವರಿಯನ್ನು 2014ರಲ್ಲಿ ತೆರವುಗೊಳಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಗಾಗಿ ವಸತಿಗೃಹ ನಿರ್ಮಾಣಕ್ಕೆ ಈ ಜಮೀನನ್ನು ಕಾಯ್ದಿರಿಸಿ 2014ರ ಜುಲೈ 21ರಂದು ಆಗಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

11 ವರ್ಷಗಳಿಂದ ಈ ನಿವೇಶನದ ಗಡಿ ಗುರುತಿಸಿ, ಸ್ವಾಧೀನಕ್ಕೆ ಪಡೆಯುವ ಪ್ರಯತ್ನವೇ ಆಗಿರಲಿಲ್ಲ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ನೀಡಿದ ದೂರನ್ನು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ತಪಾಸಣೆ ಮತ್ತು ಭೂಮಾಪನ ನಡೆಸಿದ್ದು, 15 ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿರುವುದು ದೃಢ‍ಪಟ್ಟಿದೆ.

ADVERTISEMENT

ಪಹಣಿಗೆ ಸೀಮಿತ: ಜಾರಕಬಂಡೆ ಕಾವಲ್‌ ಗ್ರಾಮದ ಸರ್ವೆ ನಂಬರ್‌ 1ರಲ್ಲಿ ಒಟ್ಟು 427 ಎಕರೆ 26 ಗುಂಟೆ ಜಮೀನು ಇತ್ತು. ಅದರಲ್ಲಿ ಖಾಲಿ ಇದ್ದ 23 ಗುಂಟೆಯನ್ನು ಜಿಲ್ಲಾಧಿಕಾರಿಯವರ ವಸತಿ ಗೃಹ ನಿರ್ಮಾಣಕ್ಕಾಗಿ ಕಾಯ್ದಿರಿಸುವಂತೆ ಯಲಹಂಕ ತಹಶೀಲ್ದಾರ್‌ ಪ್ರಸ್ತಾವ ಸಲ್ಲಿಸಿದ್ದರು. ಅದನ್ನು ಅನುಮೋದಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು.

ಆ ಬಳಿಕ 23 ಗುಂಟೆ ಜಮೀನನ್ನು ಜಿಲ್ಲಾಧಿಕಾರಿ ವಸತಿ ಗೃಹ ನಿರ್ಮಾಣಕ್ಕೆ ಕಾಯ್ದಿರಿಸಿರುವುದಾಗಿ ಪಹಣಿಯಲ್ಲಿ ಮಾತ್ರ  ನಮೂದು ಮಾಡಲಾಗಿತ್ತು. ಪೋಡಿ ದುರಸ್ತಿ ಮಾಡಿ ಆಕಾರ ಬಂದ್‌ ಮತ್ತು ಮೂಲ ಟಿಪ್ಪಣಿಯಲ್ಲಿ ಆ ಕುರಿತು ಮಾಹಿತಿ ದಾಖಲಿಸುವ ಪ್ರಕ್ರಿಯೆ ನಡೆದಿಲ್ಲ. ಸ್ವತ್ತಿಗೆ ಕಾಂಪೌಂಡ್‌ ನಿರ್ಮಿಸಿ ಸ್ವಾಧೀನಕ್ಕೆ ಪಡೆಯುವ ಪ್ರಯತ್ನವೂ ಆಗಿರಲಿಲ್ಲ.

ಖಾಲಿ ಇರುವುದು ಮೂರೇ ಗುಂಟೆ: ದೂರು ಬಂದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದರು. ನಿವೇಶನ ಒತ್ತುವರಿಯಾಗಿರುವುದು ಕಂಡುಬಂದಿತ್ತು. ಸಂಪೂರ್ಣ ಭೂಮಾಪನ ನಡೆಸಿ, ಒತ್ತುವರಿ ಕುರಿತ ಗುರುತುಗಳೊಂದಿಗೆ ನಕ್ಷೆ ಸಲ್ಲಿಸಲು ಆದೇಶ ನೀಡಿದ್ದರು.

‘ವಸತಿಗೃಹ ನಿರ್ಮಾಣಕ್ಕೆ ಕಾಯ್ದಿರಿಸಿದ್ದ 23 ಗುಂಟೆ ಜಮೀನಿನ ಪೈಕಿ 3 ಗುಂಟೆ ಮಾತ್ರ ಖಾಲಿ ಉಳಿದಿರುವುದು ಭೂಮಾಪನದ ವೇಳೆ ಗೊತ್ತಾಗಿದೆ. 15 ಅಕ್ರಮ ಕಟ್ಟಡಗಳು ನಿರ್ಮಾಣವಾಗಿವೆ. ಉಳಿದಂತೆ ಗುಡಿಸಲುಗಳು, ಶೀಟ್‌ ಮನೆಗಳು, ಕಾಂಪೌಂಡ್‌ ಹಾಕಿರುವ ಖಾಲಿ ನಿವೇಶನಗಳು ಮತ್ತು ಅನಧಿಕೃತವಾಗಿ ನಿರ್ಮಿಸಿರುವ ರಸ್ತೆ ಇದೆ’ ಎಂದು ಯಲಹಂಕ ತಹಶೀಲ್ದಾರ್‌ ಶ್ರೇಯಸ್‌ ಜಿ.ಎಸ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒತ್ತುವರಿದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈ ಪೈಕಿ ಒಬ್ಬರು ಮಾತ್ರ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಏಪ್ರಿಲ್‌ 22ರಂದು ಮುಂದಿನ ವಿಚಾರಣೆ ನಡೆಯಲಿದೆ’ ಎಂದರು.

ನಕಲಿ ದಾಖಲೆ ಸೃಷ್ಟಿಯ ಶಂಕೆ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಿಲ್ಲಾಧಿಕಾರಿ ವಸತಿಗೃಹದ ನಿವೇಶನವನ್ನು ಸ್ವಂತದ್ದು ಎಂದು ನಂಬಿಸಿ ಮಾರಾಟ ಮಾಡಿರುವ ಶಂಕೆ ಇದೆ. ಅತಿಕ್ರಮಣದಾರರು ತಹಶೀಲ್ದಾರ್‌ ನ್ಯಾಯಾಲಯಕ್ಕೆ ಸಲ್ಲಿಸುವ ದಾಖಲೆಗಳ ಪರಿಶೀಲನೆ ಬಳಿಕ ಸತ್ಯ ತಿಳಿಯಲಿದೆ ಎನ್ನುತ್ತಾರೆ ಅಧಿಕಾರಿಗಳು.

ಚದರ ಅಡಿಗೆ ₹12 ಸಾವಿರ

ಜಿಲ್ಲಾಧಿಕಾರಿ ವಸತಿಗೃಹ ನಿರ್ಮಾಣಕ್ಕೆ ಕಾಯ್ದಿರಿಸಿರುವ ನಿವೇಶನವು ಸರಸ್ವತಿಪುರ ಮುಖ್ಯರಸ್ತೆಗೆ ಸಮೀಪದಲ್ಲೇ ಇದೆ. ಅಲ್ಲಿ ಪ್ರತಿ ಚದರ ಅಡಿ ಜಮೀನಿನ ಮಾರ್ಗಸೂಚಿ ದರ ₹8000 ಇದೆ. ಆದರೆ ಮಾರುಕಟ್ಟೆ ದರ ₹12000ದಿಂದ ₹20000ದವರೆಗೂ ಇದೆ. ಒಟ್ಟು 25047 ಚದರ ಅಡಿ ವಿಸ್ತೀರ್ಣದ ನಿವೇಶನದ ಅಂದಾಜು ಮೌಲ್ಯ ₹50 ಕೋಟಿಗೂ ಹೆಚ್ಚಾಗುತ್ತದೆ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.

‘ನಿವೇಶನ ಸ್ವಾಧೀನಕ್ಕೆ ಸೂಚನೆ’

‘ವಸತಿಗೃಹ ನಿರ್ಮಾಣಕ್ಕೆ ಕಾಯ್ದಿರಿಸಿದ್ದ ನಿವೇಶನದಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಯಲಹಂಕ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿಯೇ ಸ್ವತ್ತನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗುವುದು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಪ್ರತಿಕ್ರಿಯಿಸಿದರು. ––– ‘ಸರ್ಕಾರದ ನಿರ್ಲಕ್ಷ್ಯ ಬಯಲು’ ‘₹50 ಕೋಟಿ ಮೌಲ್ಯದ ನಿವೇಶನ ಒತ್ತುವರಿ ಆಗಿರುವುದು ನಮ್ಮ ಪಕ್ಷದ ಮುಖಂಡರು ದೂರು ನೀಡಿದ ಬಳಿಕವಷ್ಟೇ ಜಿಲ್ಲಾಡಳಿತಕ್ಕೆ ತಿಳಿಯಿತು. ಇದು ಸಾರ್ವಜನಿಕ ಆಸ್ತಿಗಳ ರಕ್ಷಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತದೆ. ತಕ್ಷಣವೇ ಈ ಆಸ್ತಿಯನ್ನು ವಶಕ್ಕೆ ಪಡೆಯಬೇಕು’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್‌. ದೀಪಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.