ADVERTISEMENT

ಗಲಭೆ; ಸಂಪತ್‌ ರಾಜ್‌ಗೆ ಕೊರೊನಾ, ಆರೋಪಿ ಜಾಕೀರ್ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 21:16 IST
Last Updated 13 ಅಕ್ಟೋಬರ್ 2020, 21:16 IST

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಸಂಬಂಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಆರೋಪಿ ಎಂದು ಉಲ್ಲೇಖಿಸಲಾದ ಸ್ಥಳೀಯ ಮುಖಂಡ ಜಾಕೀರ್ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಸಿಸಿಬಿ ವಿಶೇಷ ತಂಡ ಹುಡುಕಾಟ ನಡೆಸುತ್ತಿದೆ.

ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್‌ ಅವರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿದ್ದು, ಅವರ ಬಂಧನ ಪ್ರಕ್ರಿಯೆ ಬಾಕಿ ಇದೆ. ಕೊರೊನಾ ಸೋಂಕು ತಗುಲಿದ್ದರಿಂದಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಗುಣಮುಖವಾದ ನಂತರವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಸಿಬಿ ಮೂಲಗಳು ಹೇಳಿವೆ.

‘ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರೇ ದೂರುದಾರರು. ಉಳಿದಂತೆ ಠಾಣೆ ಮೇಲಿನ ದಾಳಿ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರತ್ಯೇಕ ತನಿಖೆ ನಡೆಸುತ್ತಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ರಾಜಕೀಯ ವೈಷಮ್ಯದಿಂದಾಗಿ ಸ್ಥಳೀಯ ಮುಖಂಡರಾದ ಸಂಪತ್‌ ರಾಜ್, ಜಾಕೀರ್ ಹಾಗೂ ಇತರರು ಮನೆ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡಿದ್ದರು. ಯುವಕರನ್ನು ಪ್ರಚೋದಿಸಿದ್ದರೆಂದು ಅಖಂಡ ಶ್ರೀನಿವಾಸಮೂರ್ತಿ ಅವರು ದೂರಿನಲ್ಲಿ ತಿಳಿಸಿದ್ದರು. ಅದರನ್ವಯ ತನಿಖೆ ನಡೆಸಿ ಪುರಾವೆಗಳನ್ನು ಸಂಗ್ರಹಿಸಿ, ಸಾಕ್ಷಿಗಳ ಹೇಳಿಕೆ ಪಡೆದು 400 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.