ADVERTISEMENT

ಹಿಮೋಫಿಲಿಯಾದಿಂದ ಬಳಲುತ್ತಿರುವವರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ: ಡಿ.ಕೆ.ಶಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 10:46 IST
Last Updated 25 ಫೆಬ್ರುವರಿ 2026, 10:46 IST
<div class="paragraphs"><p>ಬೆಂಗಳೂರಿನಲ್ಲಿ ಕುಸುಮ ಸಂಜೀವಿನಿ ಅಡಿ ರೋಗ ನಿರೋಧಕ ಚಿಕಿತ್ಸೆ ಹಾಗೂ ಆಂಬುಲೆನ್ಸ್‌ ಸೇವೆ ಉದ್ಘಾಟನೆ ವೇಳೆ ಮಕ್ಕಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಾ.ಸುರೇಶ್‌ ಹನಗವಾಡಿ ಪಾಲ್ಗೊಂಡರು.</p></div>

ಬೆಂಗಳೂರಿನಲ್ಲಿ ಕುಸುಮ ಸಂಜೀವಿನಿ ಅಡಿ ರೋಗ ನಿರೋಧಕ ಚಿಕಿತ್ಸೆ ಹಾಗೂ ಆಂಬುಲೆನ್ಸ್‌ ಸೇವೆ ಉದ್ಘಾಟನೆ ವೇಳೆ ಮಕ್ಕಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಾ.ಸುರೇಶ್‌ ಹನಗವಾಡಿ ಪಾಲ್ಗೊಂಡರು.

   

ಬೆಂಗಳೂರು: ‘ಹಿಮೋಫಿಲಿಯಾ ಹಾಗೂ ಇತರೇ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ‘ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ನೆಹರು ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 'ಕುಸುಮ ಸಂಜೀವಿನಿ' ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಒಬ್ಬ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ ಐದು ಲಕ್ಷ ಖರ್ಚಾಗಲಿದೆ. ಹಿಮೋಫಿಲಿಯಾದಂತಹ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು, ಅವರ ಬದುಕಿಗೆ ಶಕ್ತಿ ತುಂಬಬೇಕು ಎಂದು ನಮ್ಮ ಸರ್ಕಾರ ಹೊರಟಿದೆ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ’ ಎಂದರು.

‘ಹಿಮೋಫಿಲಿಯಾ ರೋಗ ಬಂದ ತಕ್ಷಣ ಭವಿಷ್ಯವೇ ಇಲ್ಲ ಎಂದು ಭರವಸೆ ಕಳೆದುಕೊಳ್ಳಬಾರದು. ಮಕ್ಕಳು, ತಂದೆತಾಯಂದಿರ ಜೊತೆ ನಾವಿದ್ದೇವೆ. ಇಷ್ಟೊಂದು ಹಣ ಹೊಂದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಆದ ಕಾರಣ ನಾವು ನಿಮ್ಮಜೊತೆಯಾಗಿದ್ದೇವೆ. ಯಾವುದೇ ರೋಗ ಆಗಿರಬಹುದು ಬಯಸಿ ಬರುವಂತಹದ್ದಲ್ಲ. ಮುಗ್ದ ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಪ್ರಕೃತಿ ನಿಯಮ ಎಂದೂ ಹೇಳಬಹುದು. ಇಲ್ಲಿ ತಂದೆ ತಾಯಿ, ಮಕ್ಕಳದ್ದು ಸೇರಿದಂತೆ ಯಾರದ್ದೂ ತಪ್ಪಿಲ್ಲ. ಇದನ್ನ ನಾವು ಸ್ವೀಕರಿಸಲೇ ಬೇಕು’ ಎಂದರು.

‘ಕರ್ನಾಟಕ ಆರೋಗ್ಯ ಇಲಾಖೆ ಇಡೀ ದೇಶದಲ್ಲಿಯೇ ಕ್ರಾಂತಿ ಮಾಡುತ್ತಿದೆ. ಜನರು ಎದ್ದುನಿಂತು ಚಪ್ಪಾಳೆ ಹೊಡೆಯಬೇಡಿ ಬದಲಾಗಿ. ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವದಿಸಿ. ಆಗ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇವೆ. ಸರ್ಕಾರವೇ ರೋಗಿಗಳ ನೋವಿಗೆ ಜೊತೆಯಾಗಬೇಕು ಎಂದು ದಿನೇಶ್‌ ಗುಂಡುರಾವ್‌ ಅವರು ಸಂಪುಟದಲ್ಲಿ ಈ ವಿಚಾರ ಮಂಡಿಸಿ ಸಹಾಯಕ್ಕೆ ನಿಂತಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌ ಅವರು ಜೊತೆಯಾಗಿದ್ದಾರೆ’ ಎಂದರು.

13,940 ವೈದ್ಯರು ಹೊರಬರುತ್ತಿದ್ದಾರೆ

‘ಕರ್ನಾಟಕದಿಂದ ಪ್ರತಿವರ್ಷ 13,940 ವೈದ್ಯರು ತಯಾರಾಗುತ್ತಿದ್ದಾರೆ. 3 ಸಾವಿರ ವೈದ್ಯರು ಎಂಡಿ ಪದವಿ ಪಡೆಯುತ್ತಿದ್ದಾರೆ. 70 ಮೆಡಿಕಲ್‌ ಕಾಲೇಜು ಹೊಂದಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮೆಡಿಕಲ್‌ ಕಾಲೇಜುಗಳಿವೆ. ಸುಮಾರು 1 ಲಕ್ಷ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಪ್ರತಿವರ್ಷ ಸೇವೆಗೆ ಸಜ್ಜಾಗುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡುವ ಉಪಸಮಿತಿ ಅಧ್ಯಕ್ಷನಾಗಿದ್ದೆ. ಆಗ ಕೇಳಿದ ಎಲ್ಲರಿಗೂ ಅನುಮತಿ ನೀಡಲಾಯಿತು. ಅಂದು ಮಾಡಿದ ತೀರ್ಮಾನ ಇಂದು ಫಲ ಕಾಣುತ್ತಿದೆ. ಅಸ್ಸಾಂ, ಕೇರಳ ಸೇರಿದಂತೆ ದೇಶದ ಅನೇಕ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಪ್ರಪಂಚದ ಯಾವುದೇ ದೇಶಕ್ಕೆ ಹೋದರು ನಮ್ಮ ಕರ್ನಾಟಕದ ವೈದ್ಯರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆಯಾ ದೇಶದ ಜನರು ಆಡಳಿತ ನಡೆಸುತ್ತಿರಬಹುದು ಆದರೆ ಬುದ್ದಿವಂತಿಕೆ, ಸೇವೆ ಸೇರಿದಂತೆ ಇತರೇ ವಿಭಾಗದಲ್ಲಿ ನಮ್ಮ ವೈದ್ಯರು ಸಾಧನೆ ಮಾಡಿದ್ದಾರೆ‘ ಎಂದರು.

‘ಕರ್ನಾಟಕ ತನ್ನದೇ ಆದ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ನಮ್ಮ ಸರ್ಕಾರವೂ ಸಹ ಯುವಕರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದಾಯಕವಾಗಿ ನಿಂತಿದೆ. ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ₹ 5 ಸಾವಿರ ಉಳಿತಾಯ ಮಾಡುತ್ತಿದೆ. ಸರ್ಕಾರಕ್ಕೆ ಹೊರೆ ಆಗುತ್ತಿರಬಹುದು ಆದರೆ ಜನರ ಮೇಲಿರುವ ಆರ್ಥಿಕ ಒತ್ತಡ, ಮಾನಸಿಕ ಒತ್ತಡ ಕಡಿಮೆಯಾಗಬೇಕು ಎಂದು ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ‘ಕರ್ನಾಟಕದಲ್ಲಿ 2621 ಮಂದಿ ಹಿಮೋಫಿಲಿಯಾ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ. ಹಿಮೋಫಿಲಿಯಾ ಇಂಜೆಕ್ಷನ್‌ ಸಹಿತ ಇತರೆ ಸೌಲಭ್ಯಗಳಿಗೆ ₹17 ಕೋಟಿ ಮೀಸಲಿಟ್ಟಿದ್ದು, ಅದರ ಸಮರ್ಪಕ ಬಳಕೆಯಾಗುತ್ತಿದೆ. ಇದನ್ನು ₹50 ಕೋಟಿ ಗೆ ಏರಿಸಲು ನಾವು ಸಿದ್ದರಿದ್ದೇವೆ’ ಎಂದು ಹೇಳಿದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್‌ ಹನಗವಾಡಿ ಮಾತನಾಡಿ, ಈ ರೋಗದಿಂದ ಬಳಲುತ್ತಿರುವವರ ಸೌಲಭ್ಯಗಳಿಗಾಗಿ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದೇವೆ. ಸರ್ಕಾರ ಸಹಕಾರ ನೀಡುತ್ತಿದ್ದು, ಆರ್ಥಿಕ ಬೆಂಬಲ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.