ADVERTISEMENT

ಮಂಡ್ಯ ಬೆಳವಣಿಗೆ: ಕಾಂಗ್ರೆಸ್‌ ನಾಯಕರ ಜೊತೆ ಡಿಕೆಶಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:07 IST
Last Updated 20 ಮಾರ್ಚ್ 2019, 20:07 IST

ಬೆಂಗಳೂರು: ಸುಮಲತಾ ಅಂಬರೀಷ್‌ ನಾಮಪತ್ರ ಸಲ್ಲಿಸಿದ ವೇಳೆ ಪಕ್ಷದ ಕಾರ್ಯಕರ್ತರು ಭಾಗವಹಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಕೀಯ ಸ್ಥಿತಿಗತಿಗಳ ಕುರಿತು ಸಚಿವ ಡಿ.ಕೆ. ಶಿವಕುಮಾರ್‌ ಬುಧವಾರ ತಡರಾತ್ರಿವರೆಗೆ ಮಂಡ್ಯದ ಕಾಂಗ್ರೆಸ್‌ ನಾಯಕರ ಜೊತೆ ಚರ್ಚೆನಡೆಸಿದರು.

‘ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಸಚಿವ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ಪಕ್ಷದ ನಾಯಕರಿಗೆ ಆಹ್ವಾನ ನೀಡುತ್ತಿದ್ದಾರೆ. ನಾಯಕರ ನಿವಾಸಗಳಿಗೂ ಭೇಟಿ ನೀಡಿ‌ ಬೆಂಬಲ ಕೋರುತ್ತಿದ್ದಾರೆ.

ಆದರೆ, ನಮ್ಮ‌ ಕ್ಷೇತ್ರದಲ್ಲಿ ನಿಖಿಲ್‌ ಅಭ್ಯರ್ಥಿಯಾಗಿದ್ದರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಮಂಡ್ಯದ ಕಾಂಗ್ರೆಸ್‌ ನಾಯಕರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ನಿಖಿಲ್ ಅಥವಾ ಬೇರೆ ಯಾವ ನಾಯಕರೂ ನಮ್ಮನ್ನು ಭೇಟಿ ಮಾಡಿಲ್ಲ.

ನಮ್ಮ ಜೊತೆ ಚರ್ಚಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆದರೆ, ನಿಖಿಲ್ ಪರ ಪ್ರಚಾರ ಮಾಡುವಂತೆ ನೀವು ಸಲಹೆ ನೀಡುತ್ತೀರಿ. ಹೈಕಮಾಂಡ್ ಆದೇಶ ಎಂದೂ ಹೇಳುತ್ತೀರಿ. ಅವರು ನಮಗೆ ಮನ್ನಣೆ ನೀಡದಿರುವಾಗ ನಾವು ಏನು ಮಾಡಬೇಕು’ ಎಂದೂ
ಪ್ರಶ್ನಿಸಿದ್ದಾರೆ.

‘ಹೈಕಮಾಂಡ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ’ ಎಂದು ಶಿವಕುಮಾರ್‌ ಸಮಾಧಾನಪಡಿಸಿದ್ದಾರೆ.

ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವರ ಮನೆಯಲ್ಲಿ ನಡೆದ ಸಭೆಯಲ್ಲಿ ಚೆಲುವರಾಯಸ್ವಾಮಿ, ಗಣಿಗ ರವಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.