ADVERTISEMENT

ವೈದ್ಯೆಯ ತಿಂಗಳ ಅನುಭವ: ‘ಭಾವನಾತ್ಮಕ ಬೆಸುಗೆಯ ಬಂಧವಾದ ಚಿಕಿತ್ಸೆ’

ಒಂದು ತಿಂಗಳ ಅನುಭವ ಹಂಚಿಕೊಂಡ ಡಾ.ಜೆ. ನಾಗರತ್ನಾ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 21:59 IST
Last Updated 10 ಜೂನ್ 2021, 21:59 IST
ಕೋವಿಡ್‌ ರೋಗಿಯ ಆರೋಗ್ಯ ತಪಾಸಣೆಯ ವೇಳೆ ಉತ್ಸಾಹ ತುಂಬುತ್ತಿರುವ ವೈದ್ಯರು–ಸಾಂದರ್ಭಿಕ ಚಿತ್ರ
ಕೋವಿಡ್‌ ರೋಗಿಯ ಆರೋಗ್ಯ ತಪಾಸಣೆಯ ವೇಳೆ ಉತ್ಸಾಹ ತುಂಬುತ್ತಿರುವ ವೈದ್ಯರು–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆಯ ವೇಳೆ ಆತಂಕ-ಭೀತಿಯ ವಾತಾವರಣವಿದ್ದ ಅವಧಿಯಲ್ಲಿ ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡೆ. ವೃತ್ತಿ ಬದುಕೆಂಬ ಬುತ್ತಿಯಲ್ಲಿ ಭಾವನಾತ್ಮಕ ಬೆಸುಗೆಯ ಬಂಧದ ಹೊಸ ಅನುಭವವವು ಒಂದು ತಿಂಗಳ ಅವಧಿಯಲ್ಲಿ ದೊರೆಯಿತು.’

‘ಮಕ್ಕಳ ದಂತವೈದ್ಯ ತಜ್ಞೆಯಾದ ನನ್ನನ್ನು ಮೇ 4ರಂದು ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಯಿತು. ಬಳಿಕ ಆಪ್ತ ಸಮಾಲೋಚಕಿಯಾಗಿ, ವೈದ್ಯೆಯಾಗಿ, ಸ್ನೇಹಿತೆಯಾಗಿ, ಸಹೋದರಿಯಾಗಿ, ಮಗಳಾಗಿ ವಿವಿಧ ಆಯಾಮಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ರೋಗಿಯ ಕಡೆಯವರು ಪ್ರತಿನಿತ್ಯ ಕರೆಮಾಡಿ, ಸೋಂಕಿತರ ಸ್ಥಿತಿಗತಿಯ ಬಗ್ಗೆ ವಿಚಾರಿಸುತ್ತಿದ್ದರು. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದನಿರ್ಗಮಿಸುವುದನ್ನು ಕಂಡಾಗ ಖುಷಿಯಾಗುತ್ತಿತ್ತು. ಇನ್ನೊಂದೆಡೆ, ತೀವ್ರ ನಿಗಾ ಘಟಕದಲ್ಲಿರುವ ರೋಗಿಗಳ ಸ್ಥಿತಿಯನ್ನು ನೋಡಿದಾಗ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.’

‘ಕೆಲ ರೋಗಿಗಳ ಸಂಬಂಧಿಕರು ಸಣ್ಣ ಸಣ್ಣ ವಿಷಯಕ್ಕೂ ಪದೇ ಪದೇ ಕರೆ ಮಾಡುತ್ತಿದ್ದರು. ಆ ವೇಳೆ ಕಿರಿಕಿರಿಯಾದರೂ ತೋರ್ಪಡಿಸದೆ, ಅವರ ಮನಸ್ಸಿನ ಇಂಗಿತದಂತೆ ವಾರ್ಡ್‌ನ ವೈದ್ಯರಿಗೆ ಸಂದೇಶ ಮುಟ್ಟಿಸುತ್ತಿದ್ದೆ’

ADVERTISEMENT

‘ಕೋವಿಡ್‌ ಸೇವೆಯನ್ನು ಪ್ರಾರಂಭಿಸಿದ ಬಳಿಕ ಬೆಳಿಗ್ಗೆಯಿಂದ ರಾತ್ರಿಯವರೆಗೆ ನೂರಾರು ಕರೆಗಳು ಬರುತ್ತಿದ್ದವು. ಇದರಿಂದಾಗಿ ರಾತ್ರಿ ಮಲಗಿದ ಬಳಿಕವೂ ಮೊಬೈಲ್ ಪೋನ್ ರಿಂಗಣಿಸಿದ ಅನುಭವವಾಗುತ್ತಿತ್ತು. ಸೋಂಕಿತರ ಕುಟುಂಬದವರ ನೋವಿನ ನುಡಿಗಳು ಮನಸ್ಸಿನಲ್ಲಿ ಮಾರ್ದನಿಸುತ್ತಿದ್ದವು. ಅನಂತರದ ದಿನಗಳಲ್ಲಿ ಕರ್ತವ್ಯಕ್ಕೆ ಒಗ್ಗಿಕೊಂಡಾಗ ಮನಸ್ಸು ಸಶಕ್ತಗೊಂಡಿತು.’

–ಡಾ.ಜೆ. ನಾಗರತ್ನಾ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಸೇವೆ ನೀಡಿದ ವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.