
ಬೆಂಗಳೂರು: ‘ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಗತ್ಯವಾಗಿ ಅವರನ್ನು ದೂಷಿಸುವುದು ಬಿಡಬೇಕು’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ– ಬೆಂಗಳೂರು ಹಾಗೂ ಭಾರತೀಯ ವೈದ್ಯಕೀಯ ಸಂಘದ ಬರಹಗಾರರ ಸಮಿತಿ ಹಾಗೂ ಹರಿವು ಬುಕ್ಸ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಪುಸ್ತಕ ಜನಾರ್ಪಣೆ ಮಾಡಿ ಮಾತನಾಡಿದರು.
‘ನಮ್ಮ ಕುಟುಂಬದಲ್ಲಿಯೂ ವೈದ್ಯರಿದ್ದು, ಅವರ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ನೋಡಿದ್ದೇನೆ. ಇದರಿಂದಾಗಿ ಅವರು ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಒತ್ತಡ ಅರಿವಿನಲ್ಲಿದೆ. ವಿವಿಧ ಸಂಕೀರ್ಣ ಪ್ರಕರಣಗಳ ನಿರ್ವಹಣೆ ವೇಳೆ ಹಲವು ಸವಾಲುಗಳನ್ನು ವೈದ್ಯರು ಎದುರಿಸಬೇಕಾಗುತ್ತದೆ. ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತಪಟ್ಟರೂ ವೈದ್ಯರನ್ನು ದೂಷಿಸುತ್ತೇವೆ’ ಎಂದರು.
‘ಹಿಂದೆ ವೈದ್ಯರನ್ನು ದೇವರಂತೆ ಕಾಣುತ್ತಿದ್ದ ಜನರು, ಈಗ ಅವರ ಬಗೆಗಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕಬೇಕಿದೆ. ವೈದ್ಯಕೀಯ ಪದಗಳನ್ನು ಕನ್ನಡೀಕರಣ ಮಾಡಿ, ವೈದ್ಯ ವಿಜ್ಞಾನವನ್ನು ಸರಳವಾಗಿ ಜನರಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಆರ್.ಕೆ. ಸರೋಜಾ, ‘ಕೃತಿಯಲ್ಲಿ 83 ವೈದ್ಯರು ಲೇಖನಗಳನ್ನು ಬರೆದಿದ್ದಾರೆ. ಅಪರೂಪದ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ವೈದ್ಯ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಹೊಸ ದೃಷ್ಟಿ ನೀಡುವಂತಾಗಬೇಕು’ ಎಂದು ಹೇಳಿದರು.
ಕೃತಿಯ ಪ್ರಧಾನ ಸಂಪಾದಕ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ‘ಹೊತ್ತಲ್ಲದ ಹೊತ್ತಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಬರುವ ರೋಗಿಗಳ ಜೀವ ಉಳಿಸಲು ವೈದ್ಯರು ಹೆಣಗುತ್ತಾರೆ. ವೈದ್ಯರ ಇನ್ನೊಂದು ಮುಖ ನೋಡುವ ಪ್ರಯತ್ನ ನಡೆಯಬೇಕು. ವೈದ್ಯರ ಕಥಾನಕ ಸಂಗ್ರಹದ ಓದಿನಿಂದ ಜನಸಾಮಾನ್ಯರು ವೈದ್ಯಲೋಕದ ನಿತ್ಯ ಸಂಕಷ್ಟಗಳು, ಸುಖ–ದುಃಖಗಳನ್ನು ಸ್ವಲ್ಪಮಟ್ಟಿಗಾದರೂ ಅರಿಯುಕೊಳ್ಳಲಿ ಎನ್ನುವುದೇ ಕೃತಿ ರಚನೆ ಹಿಂದಿನ ಆಶಯ’ ಎಂದರು.
ಲೇಖಕ ಹಾಗೂ ಪ್ರಕಾಶಕ ವಸುಧೇಂದ್ರ, ಐಎಂಎ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಟಿ.ಎ. ವೀರಭದ್ರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ.ಸೂರಿರಾಜು ವಿ., ಸ್ತ್ರೀರೋಗ ತಜ್ಞೆ ಡಾ. ಇಂದಿರಾ ದೊಡ್ಡಬಳ್ಳಾಪುರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.