ADVERTISEMENT

ಕೌಟುಂಬಿಕ ಕಲಹ: ಮಗು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:34 IST
Last Updated 20 ಮಾರ್ಚ್ 2024, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಆರೋಗ್ಯ ಸಮಸ್ಯೆಯಿಂದ ಬೇಸತ್ತ ಗೃಹಿಣಿಯೊಬ್ಬರು, ಎರಡು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್‌.ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ನಡೆದಿದೆ.

ಶೃತಿಕಾ (2) ಎಂಬ ಮಗು ಮೃತಪಟ್ಟಿದ್ದು, ತಾಯಿ ಚಿನ್ನಾ (24) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಲಕ್ಷ್ಮೀನಾರಾಯಣ–ಚಿನ್ನಾ ದಂಪತಿ ಮೂರು ತಿಂಗಳ ಹಿಂದೆ ಸೀಗೆಹಳ್ಳಿಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಚಿನ್ನಾ ಅವರಿಗೆ ಆರೋಗ್ಯ ಸಮಸ್ಯೆಯಿತ್ತು. ಮನೆಯಲ್ಲಿ ನಡೆಯುತ್ತಿದ್ದ ಗಲಾಟೆಯಿಂದ ಅವರು ಬೇಸತ್ತಿದ್ದರು ಎನ್ನಲಾಗಿದೆ’

ADVERTISEMENT

‘ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆದಾಗ ಮಗುವನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ಪತಿ ಬುದ್ಧಿಮಾತು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಸುಮ್ಮನಾಗುತ್ತಿದ್ದರು. ಮಾರ್ಚ್ 17ರಂದು ಪತಿ ಲಕ್ಷ್ಮೀನಾರಾಯಣ ಅವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಗುವನ್ನು ಕೊಂದ ಬಳಿಕ ಪತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಅವರು ತಕ್ಷಣವೇ ಪಕ್ಕದ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿತ್ತು’ ಎಂದು ಮೂಲಗಳು ಹೇಳಿವೆ.

ಲಕ್ಷ್ಮೀನಾರಾಯಣ ನೀಡಿದ ಹೇಳಿಕೆ ಆಧರಿಸಿ, ಕೆ.ಆರ್.ಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.