ADVERTISEMENT

ಹೋರ್ಡಿಂಗ್‌ ಹಾವಳಿಗೆ ಮತ್ತೆ ಅವಕಾಶ ಕಲ್ಪಿಸದಿರಿ

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೇಯರ್‌ ಪತ್ರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 18:49 IST
Last Updated 5 ಸೆಪ್ಟೆಂಬರ್ 2020, 18:49 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಪ್ರದರ್ಶನನ್ನು ನಿಷೇಧಿಸಲಾಗಿದೆ. ಹಾಗಾಗಿ ಹೋರ್ಡಿಂಗ್‌ ಹಾವಳಿಗೆಮತ್ತೆ ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಬಿಬಿಎಂಪಿ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ಬೈಲಾ 2018’ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆಗೊಂಡಿದ್ದು, 2018ರ ಸೆ.19ರಂದು ಅಂತಿಮ ಅಧಿಸೂಚನೆ ಪ್ರಕಟವಾಗಿದೆ. ಜಾರಿಯಲ್ಲಿರುವ ಈ ಬೈಲಾ ಪ್ರಕಾರ ನಗರದ ಸೌಂದರ್ಯದ ಹಿತದೃಷ್ಟಿಯಿಂದ ನಗರದಲ್ಲಿ ಹೋರ್ಡಿಂಗ್‌ ಪ್ರದರ್ಶನ ನಿಷೇಧಿಸಲಾಗಿದೆ. ಈ ನಡುವೆ ಸರ್ಕಾರ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ರ ಕರಡು ಅಧಿಸೂಚನೆಯನ್ನು 2019ರ ಜುಲೈ 15ರಂದು ಪ್ರಕಟಿಸಿತ್ತು.

‘ಹೊರಾಂಗಣ ಜಾಹೀರಾತು ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಒತ್ತಡ ಹೇರಿ ಬಿಬಿಎಂಪಿ ಜಾಹೀರಾತು ನಿಯಮಗಳ ಕರಡಿನಲ್ಲಿ ಹೋರ್ಡಿಂಗ್‌ ಪ್ರದರ್ಶನಕ್ಕೆ ಅನುವಾಗುವಂತೆ ಬದಲಾವಣೆ ಮಾಡಲು ಹಿಂಬಾಗಿಲಿನಿಂದ ಪ್ರಯತ್ನಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಜಾಹೀರಾತು ನಿಯಮಗಳ ಅಂತಿಮ ಅಧಿಸೂಚನೆಯಲ್ಲಿ ಹೋರ್ಡಿಂಗ್‌ ಅಳವಡಿಕೆಗೆ ಅವಕಾಶ ನೀಡುವ ರೀತಿ ಕಡತ ಮಂಡಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ನಗರದಲ್ಲಿ ಹೋರ್ಡಿಂಗ್‌ ಹಾವಳಿ ಹೆಚ್ಚಲಿದೆ’ ಎಂದು ಮೇಯರ್‌ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬಿಬಿಎಂಪಿ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ಬೈಲಾ 2018ಕ್ಕೆ ವ್ಯತಿರಿಕ್ತವಾದ ಯಾವುದೇ ನಿಯಮಗಳನ್ನು ರೂಪಿಸದಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು’ ಎಂದು ಮೇಯರ್ ಅವರು ಮುಖ್ಯ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಮತ್ತೆ ಹೋರ್ಡಿಂಗ್‌ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಮೇಯರ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಅದರ ಪ್ರತಿಯನ್ನೂ ಮೇಯರ್‌ ತಮ್ಮ ಪತ್ರದ ಜೊತೆ ಲಗತ್ತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.