ADVERTISEMENT

‘ಯಾವುದೇ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಬೇಡಿ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 21:35 IST
Last Updated 18 ಜುಲೈ 2020, 21:35 IST
ಅಬ್ದುಲ್‌ ಅಜೀಂ 
ಅಬ್ದುಲ್‌ ಅಜೀಂ    

ಬೆಂಗಳೂರು: ಕೊರೊನಾ ಸೋಂಕು ದೃಢಪಡದವರ ಶವಸಂಸ್ಕಾರದಲ್ಲಿ ನೂರಾರು ಜನ ಪಾಲ್ಗೊಳ್ಳುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಹೇಳಿದ್ದಾರೆ.

‘ಸೋಂಕಿತರ ನೆರವಿಗಾಗಿ ಸಹಾಯವಾಣಿ ತೆರೆದಿದ್ದೇವೆ. ಮೂರು ದಿನಗಳಿಂದ ಹಲವಾರು ಕರೆಗಳು ಬಂದಿವೆ. ಸೋಂಕಿನಿಂದಲ್ಲದೇ ಬೇರೆ ಕಾರಣಗಳಿಂದ ಮೃತಪಟ್ಟವರ ಬಗ್ಗೆಯೂ ಅವರ ಕುಟುಂಬದವರನ್ನು ವಿಚಾರಿಸಿದೆವು. ಹೀಗೆ, ಸಾವಿಗೀಡಾದ ಬಹುತೇಕರಿಗೆ ಮೊದಲು ಗಂಟಲು ಕೆರೆತ ಕಾಣಿಸಿಕೊಂಡಿತ್ತು. ಕೆಮ್ಮು ಬರುತ್ತಿತ್ತು. ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಕೆಮ್ಮು ಹಾಗೂ ಜ್ವರಕ್ಕೆ ಔಷಧಿ ತೆಗೆದುಕೊಂಡಿದ್ದರು. ಇವರಲ್ಲಿ ಬಹುತೇಕರು ನ್ಯೂಮೊನಿಯಾ ಮತ್ತು ಹೃದಯಾಘಾತದಿಂದ ಸಾವಿಗೀಡಾಗಿರುವುದು ಗಮನಕ್ಕೆ ಬಂದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ಈ ಸಾವುಗಳು ಒಂದೇ ರೀತಿಯದ್ದಾಗಿದ್ದು, ಕೊರೊನಾ ಸೋಂಕು ತಗುಲಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಇದನ್ನು ಘೋಷಿಸಲು ಆಗಿಲ್ಲ. ಹೃದಯಾಘಾತ ಮತ್ತು ನ್ಯೂಮೊನಿಯಾದಿಂದ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಇವರ ಶವಸಂಸ್ಕಾರದಲ್ಲಿ ಹೆಚ್ಚು ಜನ ಸೇರಿದ್ದಾರೆ. ನಾನು ನೋಡಿದಂತೆ, ಒಬ್ಬರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇಲ್ಲೆಲ್ಲ ಹಸ್ತಲಾಘವ ಮಾಡುತ್ತಾರೆ ಹಾಗೂ ತಬ್ಬಿಕೊಂಡು ಸಾಂತ್ವನ ಹೇಳುತ್ತಾರೆ. ಬೇರೆ ಬೇರೆ ಊರುಗಳಿಂದಲೂ ಬಂದಿರುತ್ತಾರೆ. ಸೋಂಕು ಹರಡಲು ಇದೇ ಮೂಲ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಸದ್ಯದ ಸಂದರ್ಭದಲ್ಲಿ ಯಾರು, ಯಾವುದೇ ತೊಂದರೆಯಿಂದ ಸಾವಿಗೀಡಾದರೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದಿರುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.