ADVERTISEMENT

ಎರಡು ವರ್ಷದ ದ್ವೇಷಕ್ಕೆ ಜೋಡಿ ಕೊಲೆ

ಜೆ.ಪಿ.ನಗರದಲ್ಲಿ ನಡೆದ ಪ್ರಕರಣ, ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:51 IST
Last Updated 27 ಆಗಸ್ಟ್ 2019, 19:51 IST

ಬೆಂಗಳೂರು: ಜೆ.ಪಿ.ನಗರದಲ್ಲಿ ಭಾನುವಾರ ರಾತ್ರಿ (ಆ. 25) ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು ರೌಡಿ ಮಲಯಾಳಿ ಮಧು (37) ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್ ಠಾಣೆಯ ರೌಡಿಶೀಟರ್ ಮಂಜ (27) ಮತ್ತು ಆತನ ಸ್ನೇಹಿತ ಬಿಟಿಎಂ ಲೇಔಟ್‍‌ ನಿವಾಸಿ ವರುಣ್ ರೆಡ್ಡಿ (24) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸುಬ್ರಮಣ್ಯಪುರ ಉಪವಿಭಾಗದ ಎಸಿಪಿ ಮಹದೇವ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎಚ್‌.ವಿ.ಪರಮೇಶ್, ಪಿಎಸ್ಐ ಕೆ. ಮಧು ಒಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆರೋಪಿ ಮಲಯಾಳಿ ಮಧು, ರೌಡಿ ಟ್ಯಾಬ್ಲೆಟ್ ರಘುನ ಸಹಚರ. ಎರಡು ವರ್ಷಗಳ ಹಿಂದೆ ರಘುವನ್ನು ಮಂಜ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಿದ್ದರು. ಅದೇ ದ್ವೇಷದಿಂದ ಮಲಯಾಳಿ ಮಧು ಹಾಗೂ ಆತನ ಸಹಚರರು ಈ ಕೊಲೆ ಮಾಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಮಂಜ ಹಾಗೂ ಬಿ.ವಿ. ಲಿಖಿನ್ ಅಲಿಯಾಸ್ ಲಿಖಿನ್ ಬೋಪಣ್ಣ ಕುಪ್ಪಂಡ (26) ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮನು ಹಾಗೂ ವಿನೋದ ಅಲಿಯಾಸ್ ಕೋತಿ ತಲೆಮರೆಸಿಕೊಂಡಿದ್ದಾರೆ’ ಎಂದರು.

ಬೈಕ್‌ಗೆ ಕಾರು ಗುದ್ದಿಸಿ ಕೃತ್ಯ:‘ರೌಡಿ ಮಧು ಹಾಗೂ ಬಿಲ್ಡರ್‌ ಒಬ್ಬರ ಮಗನಾಗಿರುವ ವರುಣ್‌ ಇದೇ 25ರಂದು ರಾತ್ರಿ ಜೆ.ಪಿ. ನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಕಾರಿನಲ್ಲಿ ಬಂದಿದ್ದ ಆರೋಪಿಗಳು, ಬೈಕ್‌ಗೆ ಗುದ್ದಿಸಿ ಬೀಳಿಸಿದ್ದರು. ಇಬ್ಬರನ್ನೂ ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಚ್ಚಿ ಕೊಂದಿದ್ದಾರೆ. ವರುಣ್‌ಗೆ ಇತ್ತೀಚೆಗೆ ರೌಡಿ ಮಂಜನ ಪರಿಚಯವಾಗಿತ್ತು. ಮಂಜನನ್ನು ಕೊಲೆ ಮಾಡಲು ಬಂದಿದ್ದ ಆರೋಪಿಗಳು ವರುಣ್‌ನನ್ನೂ ಹತ್ಯೆ ಮಾಡಿದ್ದಾರೆ’ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಶರಣಾದ ನರೇಂದ್ರ
‘ಟ್ಯಾಬ್ಲೆಟ್ ರಘುವಿನ ಸಹೋದರ ನರೇಂದ್ರ ಸಹ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆತ ನ್ಯಾಯಾಲಯಕ್ಕೆ ಹೋಗಿ ಶರಣಾಗಿದ್ದಾನೆ. ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.