ADVERTISEMENT

ವರದಕ್ಷಿಣೆ ಕಿರುಕುಳ; ಜೈಪುರದಲ್ಲಿ ಪೈಲಟ್ ಸೆರೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:44 IST
Last Updated 16 ಜನವರಿ 2019, 18:44 IST
ಯುದಿಷ್ಠಿರ
ಯುದಿಷ್ಠಿರ   

ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದಡಿ ಇಂಡಿಗೋ ವಿಮಾನದ ಪೈಲಟ್ ಯುಧಿಷ್ಠಿರ ಪೂನಿಯಾ (32) ಎಂಬುವರನ್ನು ಎಚ್‌ಎಎಲ್ ಪೊಲೀಸರು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಯುಧಿಷ್ಠಿರ ವಿರುದ್ಧ ಅವರ ಪತ್ನಿ ಪೀನು ಸಿಂಗ್ ಅವರು 2018ರ ಸೆ.5ರಂದು ಎಚ್‌ಎಎಲ್ ಠಾಣೆಗೆ ದೂರು ಕೊಟ್ಟಿದ್ದರು. ವಿಚಾರಣೆಗೆ ಹಾಜರಾಗದೆ ಓಡಾಡುತ್ತಿದ್ದ ಆತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ಅದರನ್ವಯ ಎಸ್‌ಐ ನವೀನ್‌ ನೇತೃತ್ವದ ತಂಡ ಬುಧವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.

ಜೈಪುರದ ಹನುಮಾನ್‌ನಗರ ನಿವಾಸಿಯಾದ ಯುಧಿಷ್ಠಿರ, 2014ರ ಮೇ 2ರಂದು ಪೀನು ಅವರನ್ನು ವಿವಾಹವಾಗಿದ್ದರು. ಮರುವರ್ಷವೇ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ ದಂಪತಿ, ಮಾರತ್ತಹಳ್ಳಿಯ ‘ಪೂರ್ವ ರೀವಿಯರ್’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದರು.

ADVERTISEMENT

ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಪೀನು, ‘ಯುಧಿಷ್ಠಿರ ಹಾಗೂ ಆತನ ತಾಯಿ ಬಿಮ್ಲಾ ಪೂನಿಯಾ ಮದುವೆ ಸಮಯದಲ್ಲಿ ಹಣ, ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಅವರು, ಹೆಣ್ಣು ಮಗು ಜನಿಸಿದ ಬಳಿಕ ಕಿರುಕುಳ ನೀಡಲು ಶುರು ಮಾಡಿದರು. ಇನ್ನಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಹೀಗಾಗಿ, ಅವರಿಂದ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದೇನೆ. ಅತ್ತೆ ಹಾಗೂ ಗಂಡನ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ದೂರು ಕೊಟ್ಟಿದ್ದರು.

‘ಯುಧಿಷ್ಠಿರ ಫೋಟೊ ಹಿಡಿದು ನಸುಕಿನಿಂದಲೂ ವಿಮಾನ ನಿಲ್ದಾಣದ ಹೊರಗೆ ಕಾಯುತ್ತ ನಿಂತಿದ್ದೆವು. 5 ಗಂಟೆಗೆ ಕಾರಿನಲ್ಲಿ ಬಂದ ಅವರನ್ನು ಕೂಡಲೇ ವಶಕ್ಕೆ ಪಡೆದೆವು. ಈ ವೇಳೆ ಕೆಲವರು ಆರೋಪಿಯ ರಕ್ಷಣೆಗೆ ಧಾವಿಸಿದರು. ಪೊಲೀಸ್ ಗುರುತಿನ ಚೀಟಿ ಹಾಗೂ ನ್ಯಾಯಾಲಯದ ವಾರಂಟ್ ಪ್ರತಿ ತೋರಿಸುತ್ತಿದ್ದಂತೆಯೇ ಅವರು ಸುಮ್ಮನೆ ಹೋದರು’ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.