ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದ ಅಡಿ ನಿರ್ದೇಶಕ ಎಸ್. ನಾರಾಯಣ್, ಅವರ ಪತ್ನಿ ಭಾಗ್ಯವತಿ ಹಾಗೂ ಪುತ್ರ ಪವನ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೊಸೆ ಪವಿತ್ರಾ ಅವರು ನೀಡಿದ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 85 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. 2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ಅವರ ಮದುವೆ ನಡೆದಿತ್ತು.
‘ಮದುವೆಯ ಸಂದರ್ಭದಲ್ಲಿ ₹1 ಲಕ್ಷ ಮೌಲ್ಯದ ಚಿನ್ನದ ಉಂಗುರ ಕೊಡಲಾಗಿತ್ತು. ಅಲ್ಲದೇ ಮದುವೆಯ ಖರ್ಚಿನ ಮೊತ್ತ ಕೇಳಿದ್ದರಿಂದ ಅದನ್ನೂ ಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳ ಬಳಿಕ, ಅತ್ತೆ ಹಾಗೂ ಮಾವ ಜಗಳವಾಡಿಕೊಂಡಿದ್ದರು. ಅವರಿಬ್ಬರ ಜಗಳಕ್ಕೆ ನಾನೇ ಕಾರಣವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. 2022ರಲ್ಲಿ ಬೇರೆ ಮನೆ ಮಾಡಿಕೊಂಡು ತೆರಳಿದ್ದೆವು’ ಎಂಬುದಾಗಿ ಪವಿತ್ರಾ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಪವನ್ ಪದವೀಧರನಾಗದೇ ಇದ್ದುದರಿಂದ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ನಾನೇ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದೆ. ಕಾರು ತೆಗೆದುಕೊಳ್ಳುವುದಾಗಿ ಪವನ್ ಹೇಳಿದ್ದರಿಂದ ₹ 1 ಲಕ್ಷ ಕೊಟ್ಟಿದ್ದೆ. ಅವರ ತಾಯಿಯ ಬಳಿ ₹75 ಸಾವಿರ ತೆಗೆದುಕೊಂಡಿದ್ದರು. ಮಗು ಜನಿಸಿದ ಮೇಲೆ ಅದರ ಖರ್ಚನ್ನು ನಾನೇ ನೋಡಿಕೊಂಡಿದ್ದೆ. ಅದಾಗಿ ಮೂರು ತಿಂಗಳ ನಂತರ ಮಾವ (ಎಸ್.ನಾರಾಯಣ್) ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದರು. ಪವನ್ ಮತ್ತು ನಾನು ಮನೆಗೆ ಹೋಗಿದ್ದೆವು. ಮನೆಗೆ ತೆರಳಿದ ಮೇಲೆ ಪತಿ ಹಿಂಸೆ ನೀಡುವುದಕ್ಕೆ ಆರಂಭಿಸಿದ್ದರು. ಕಲಾ ಸಾಮ್ರಾಟ್ ಟೀಮ್ ಅಕಾಡೆಮಿ ಹೆಸರಿನಲ್ಲಿ ಫಿಲ್ಮ್ ಇನ್‌ಸ್ಟಿಟ್ಯೂಟ್ ಆರಂಭಿಸಲಾಗಿತ್ತು. ಅದಕ್ಕೂ ಹಣ ಕೇಳಿದ್ದರಿಂದ ನಮ್ಮ ತಾಯಿಯ ಚಿನ್ನಾಭರಣವನ್ನು ಅಡವಿಟ್ಟು ನೆರವು ನೀಡಿದ್ದೆ. ಸಂಸ್ಥೆ ನಷ್ಟಕ್ಕೆ ಒಳಗಾದ ಮೇಲೆ ಮುಚ್ಚಲಾಗಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಸಂಸ್ಥೆ ಮುಚ್ಚಿದ ಮೇಲೆ ಹಣ ತರುವಂತೆ ಕಿರುಕುಳ ನೀಡಿದ್ದರು. ₹10 ಲಕ್ಷ ಸಾಲ ಮಾಡಿಕೊಟ್ಟಿದ್ದೆ. ಪವನ್ ಅವರು ಐದು ತಿಂಗಳು ಇಎಂಐ ಕಟ್ಟಿದ್ದರು. ಬಳಿಕ ಇಎಂಐ ಕಟ್ಟಲಿಲ್ಲ. ಬಳಿಕ ಮನೆಯಿಂದ ಹೊರಹಾಕಿದರು. ಈಗ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನನಗೆ ಏನಾದರೂ ಸಮಸ್ಯೆಯಾದರೆ ನಾರಾಯಣ್, ಭಾಗ್ಯವತಿ ಹಾಗೂ ಪವನ್ ಅವರೇ ಕಾರಣ’ ಎಂದು ದೂರಿದ್ದಾರೆ.
ಮಾತುಕತೆಯೇ ನಿಂತು ಹೋಗಿತ್ತು: ನಾರಾಯಣ್ ಪ್ರತಿಕ್ರಿಯೆ
‘ಪವಿತ್ರಾ ಅವರು ಮನೆ ಬಿಟ್ಟು ಹೋಗಿ ಹತ್ತು ತಿಂಗಳು ಆಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆಯಾಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಗಿತ್ತು. ವಯಸ್ಸು, ವ್ಯಕ್ತಿತ್ವಕ್ಕೂ ಪವಿತ್ರಾ ಅವರು ಬೆಲೆ ಕೊಡುತ್ತಿರಲಿಲ್ಲ’ ಎಂದು ಎಸ್.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.