ADVERTISEMENT

ಒಳಚರಂಡಿ ಪೈಪ್‌ಲೈನ್‌ ದುರಸ್ತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:58 IST
Last Updated 13 ಜೂನ್ 2019, 19:58 IST
ದುರಸ್ತಿಗೊಂಡಿರುವ ಮ್ಯಾನ್‌ಹೋಲ್‌
ದುರಸ್ತಿಗೊಂಡಿರುವ ಮ್ಯಾನ್‌ಹೋಲ್‌   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರ ಕೆರೆಯ ಸಮೀಪದಲ್ಲಿ ದುಷ್ಕರ್ಮಿಗಳಿಂದ ಹಾನಿಗೊಳಗಾಗಿದ್ದ ಒಳಚರಂಡಿ ಮುಖ್ಯ ಪೈಪ್‌ಲೈನ್‌ ಹಾಗೂ ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಿರುವುದರಿಂದ ಬಹಳ ದಿನಗಳಿಂದ ಸ್ಥಳೀಯ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆ ನಿವಾರಣೆಯಾಗಿದೆ.

ಒಂದೂವರೆ ತಿಂಗಳ ಹಿಂದೆ ಪುಟ್ಟಆಂಜಿನಪ್ಪ ಬಡಾವಣೆ ಮತ್ತು ಗಣೇಶನಗರದ ಮಧ್ಯಭಾಗದಲ್ಲಿ ಹಾದುಹೋಗಿದ್ದ ಒಳಚರಂಡಿ ಮುಖ್ಯ ಕೊಳವೆಮಾರ್ಗದ ಕೆಲವು ಪೈಪ್‌ಗಳಿಗೆ ಹಾನಿ ಮಾಡಿದ್ದ ದುಷ್ಕರ್ಮಿಗಳು, 2 ಮ್ಯಾನ್‌ಹೋಲ್‌ಗಳಲ್ಲಿ ಸಿಮೆಂಟ್ ಮತ್ತು ಮರಳಿನ ಚೀಲಗಳನ್ನು ತುಂಬಿದ್ದರು. ದೊಡ್ಡಬೊಮ್ಮಸಂದ್ರ ಮತ್ತು ವಿದ್ಯಾರಣ್ಯಪುರ ವ್ಯಾಪ್ತಿಯ ಬಡಾವಣೆಗಳಿಂದ ಕೊಳಚೆ ನೀರು ಹರಿದು ಬರುವ ಮಾರ್ಗಗಳು ಕಟ್ಟಿಕೊಂಡಿದ್ದವು.

ಇದರಿಂದ ಮ್ಯಾನ್‌ಹೋಲ್‌ಗಳಲ್ಲಿ ಕೊಳಚೆನೀರು ಉಕ್ಕಿಬರುವುದರ ಜೊತೆಗೆ ಹಿಮ್ಮುಖವಾಗಿ ಕೆರೆ ಮತ್ತು ಬಡಾವಣೆಗಳಿಗೆ ಹರಿಯುತ್ತಿತ್ತು. ಇದರಿಂದ ಪುಟ್ಟಆಂಜಿನಪ್ಪ ಬಡಾವಣೆ, ಗಣೇಶನಗರ, ವೆಂಕಟಗಿರಿಯಪ್ಪ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಅವರಿಗೆ ದೂರು ನೀಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.

ADVERTISEMENT

ಸಮಸ್ಯೆಯನ್ನು ಬಗೆಹರಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದರು. ಪರಿಶೀಲನೆ ನಡೆಸಿದ ಅಧಿಕಾರಿಗಳು, ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಕಾಮಗಾರಿ ಕೈಗೊಂಡು ಹಾನಿಗೊಳಗಾಗಿದ್ದ ಕೆಲವು ಪೈಪುಗಳನ್ನು ತೆಗೆದು, ಹೊಸ ಪೈಪುಗಳನ್ನು ಅಳವಡಿಸಿದರು. ಮ್ಯಾನ್‌ಹೋಲ್‌ಗಳನ್ನು ದುರಸ್ತಿಗೊಳಿಸಿ, ಅದರಲ್ಲಿ ತುಂಬಿದ್ದ ತ್ಯಾಜ್ಯವಸ್ತುಗಳನ್ನು ತೆರವುಗೊಳಿಸಿದರು.

ಒಳಚರಂಡಿ ಕೊಳವೆಮಾರ್ಗ ಕಟ್ಟಿಕೊಂಡ ಪರಿಣಾಮ, ಬಡಾವಣೆಯ 25 ಮನೆಗಳ ಬಳಿ ಒಂದೂವರೆ ಅಡಿಗಳಷ್ಟು ಕೊಳಚೆ ನೀರು ನಿಂತಿತ್ತು. ಇದರಿಂದ ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿ, ವೃದ್ಧರು, ಹೆಂಗಸರು ಹಾಗೂ ಮಕ್ಕಳು ಮನೆಗಳಿಂದ ಹೊರಬರಲು ಸಾಧ್ಯವಾಗದೆ ತುಂಬಾ ತೊಂದರೆ ಅನುಭವಿಸಿದರು. ಇದೀಗ ಸಮಸ್ಯೆ ಬಗೆಹರಿದಿದೆ’ ಎಂದು ದೇಶಬಂಧುನಗರದ ನಿವಾಸಿ ಸತೀಶ್ ತಿಳಿಸಿದರು.

‘ಕೆಲವು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಒಳಚರಂಡಿ ಮುಖ್ಯ ಕೊಳವೆಮಾರ್ಗದ ಪೈಪುಗಳನ್ನು ಹಾನಿಗೊಳಿಸಿ, ಕೊಳವೆ ಮತ್ತು ಮ್ಯಾನ್‌ಹೋಲ್‌ಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತುಂಬಿದ್ದರು.’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.