ADVERTISEMENT

ಸಂಸ್ಕೃತಿ ಬೆಳವಣಿಗೆಗೆ ಕಲೆ ಅಗತ್ಯ: ಸಾಹಿತಿ ಕಮಲಾ ಹಂಪನಾ

ಸಾಹಿತಿ ಕಮಲಾ ಹಂಪನಾ ಅಭಿಮತ *ಏಕವ್ಯಕ್ತಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 16:32 IST
Last Updated 16 ಸೆಪ್ಟೆಂಬರ್ 2023, 16:32 IST
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಆರ್. ಮತ್ತು ಎಂ.ಎಸ್. ಲಕ್ಷ್ಮಿಕಾರಂತ್ ಅವರಿಗೆ ರಂಗಗೌರವ ಪ್ರದಾನ ಮಾಡಲಾಯಿತು. (ನಿಂತವರು ಎಡದಿಂದ) ವತ್ಸಲಾ ಮೋಹನ್, ಲೇಖಕಿ ಲತಾ ಶ್ರೀನಿವಾಸ್, ಟಿಟಿಡಿ ನಿರ್ದೇಶಕಿ ವಸಂತ ಕವಿತಾ, ಲೇಖಕಿಯರಾದ ಲಲಿತಾ ಶೇಷಾದ್ರಿ, ವಿಜಯಾ ಮತ್ತು ಕಮಲಾ ಹಂಪನಾ ಇದ್ದಾರೆ -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಆರ್. ಮತ್ತು ಎಂ.ಎಸ್. ಲಕ್ಷ್ಮಿಕಾರಂತ್ ಅವರಿಗೆ ರಂಗಗೌರವ ಪ್ರದಾನ ಮಾಡಲಾಯಿತು. (ನಿಂತವರು ಎಡದಿಂದ) ವತ್ಸಲಾ ಮೋಹನ್, ಲೇಖಕಿ ಲತಾ ಶ್ರೀನಿವಾಸ್, ಟಿಟಿಡಿ ನಿರ್ದೇಶಕಿ ವಸಂತ ಕವಿತಾ, ಲೇಖಕಿಯರಾದ ಲಲಿತಾ ಶೇಷಾದ್ರಿ, ವಿಜಯಾ ಮತ್ತು ಕಮಲಾ ಹಂಪನಾ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಜ್ಞಾನದ ಯುಗದಲ್ಲಿ ಕಲೆ, ಸಾಹಿತ್ಯ ಏಕೆ ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ. ಆದರೆ, ನಮ್ಮ ಸಂಸ್ಕೃತಿ ಬೆಳವಣಿಗೆ ಹೊಂದಬೇಕಾದರೆ ಇವು ಅತ್ಯಗತ್ಯ’ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದರು. 

ರಂಗಚಂದಿರ ಮತ್ತು ಥಿಯೇಟರ್ ಥೆರಪಿ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಬೇಲೂರು ರಘುನಂದನ್ ಅವರ ಏಕವ್ಯಕ್ತಿ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. 

‘ಹೂವಿನ ಮಾಲೆ ದೇವರ ಅಡಿಗೆ ಅಥವಾ ಹೆಣ್ಣಿನ ಮುಡಿಗೆ ಸೇರಬೇಕು. ಇಲ್ಲವಾದರೆ ಅದು ಬಾಡಿ, ವ್ಯರ್ಥವಾಗುತ್ತದೆ. ಅದೇ ರೀತಿ, ಕಲೆಯು ನಿಗದಿತ ಪ್ರೇಕ್ಷಕರನ್ನು ತಲುಪಬೇಕು. ಇತ್ತೀಚಿನ ದಿನಗಳಲ್ಲಿ ನಾಟಕಗಳಿಗೆ ಪ್ರೇಕ್ಷಕರು ನಿರೀಕ್ಷಿತ ಸಂಖ್ಯೆಯಲ್ಲಿ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಟಕೋತ್ಸವ ಆಯೋಜಿಸುವುದು ದೊಡ್ಡ ಸಾಹಸದ ಕೆಲಸ. ರಘುನಂದನ್ ಅವರು ವರ್ತಮಾನದ ಅಗತ್ಯಗಳಿಗೆ ಪೂರಕವಾಗಿ ಹೊಸ ಬಗೆಯ ನಾಟಕಗಳನ್ನು ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

ಲೇಖಕಿ ವಿಜಯಾ, ‘ಲಿಂಗತ್ವ ಅಲ್ಪಸಂಖ್ಯಾತರಾಗಿದ್ದ ಮಂಜಮ್ಮ ಜೋಗತಿ ಅವರು ಕಟ್ಟುಪಾಡುಗಳನ್ನು ದಾಟಿ, ರಂಗಭೂಮಿ ಮೂಲಕ ತಮ್ಮ ಜೀವನ ಕಟ್ಟಿಕೊಂಡರು. ಯಾವುದು ನಮ್ಮ ಮೇಲೆ ಹೇರಲ್ಪಡುತ್ತದೆಯೋ ಅದನ್ನು ಕಿತ್ತು ಹಾಕಬೇಕು. ಕಟ್ಟುಪಾಡುಗಳನ್ನು ದಾಟಿ ಹೊರಗಡೆ ಬರುವುದೇ ಬಿಡುಗಡೆ. ರಘುನಂದನ್ ಅವರ ನಾಟಕದಲ್ಲಿ ಇಂತಹ ಸೂಕ್ಷ್ಮಗಳನ್ನು ನೋಡಬಹುದು’ ಎಂದು ತಿಳಿಸಿದರು. 

ಕಲಾವಿದರಾದ ಎಂ.ಎಸ್. ಲಕ್ಷ್ಮೀಕಾರಂತ್ ಹಾಗೂ ಅರುಣ್ ಕುಮಾರ್ ಆರ್. ಅವರಿಗೆ ರಂಗಗೌರವ ಪ್ರದಾನ ಮಾಡಲಾಯಿತು. ಬಳಿಕ ಬೇಲೂರು ರಘುನಂದನ್ ನಿರ್ದೇಶನದ ‘ಅಧಿನಾಯಕಿ’ ಹಾಗೂ ‘ಮಾತಾ’ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.