ADVERTISEMENT

ಚಳ್ಳಕೆರೆ ಬಳಿ ‘ರುಸ್ತುಂ–2’ ಪತನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:40 IST
Last Updated 17 ಸೆಪ್ಟೆಂಬರ್ 2019, 19:40 IST
ಜೋಡಿ ಚಿಕ್ಕೇನಹಳ್ಳಿ ಸಮೀಪ ಮಂಗಳವಾರ ಪತನಗೊಂಡ ರುಸ್ತುಂ–2.
ಜೋಡಿ ಚಿಕ್ಕೇನಹಳ್ಳಿ ಸಮೀಪ ಮಂಗಳವಾರ ಪತನಗೊಂಡ ರುಸ್ತುಂ–2.   

ಬೆಂಗಳೂರು/ಚಿತ್ರದುರ್ಗ: ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾನವ ರಹಿತ ಲಘು ವಿಮಾನ(ಯುಎವಿ) ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಸಮೀಪ ಪತನಗೊಂಡಿದೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರದ ಡಿಆರ್‌ಡಿಒ ವೈಮಾನಿಕ ಪರೀಕ್ಷಾ ವಲಯ ‘ರುಸ್ತುಂ–2’ ಹೆಸರಿನ ಯುಎವಿ ಮಂಗಳವಾರ ನಸುಕಿನಲ್ಲಿ ಪರೀಕ್ಷಾರ್ಥ ಹಾರಾಟ ಆರಂಭಿಸಿತು. ಹಾಸನದ ವಾಯು ನೆಲೆಯವರೆಗೂ ಹಾರಾಟ ನಡೆಸಿ ಚಳ್ಳಕೆರೆಗೆ ಮರಳ ಬೇಕಿತ್ತು. ಆದರೆ, ಬೆಳಿಗ್ಗೆ 6.30ರ ಸುಮಾರಿಗೆ ವಿಮಾನ ರಡಾರ್‌ ಸಂಪರ್ಕ ಕಳೆದುಕೊಂಡಿತ್ತು. ಇದಾದ 15 ನಿಮಿಷದ ಬಳಿಕ ಅದು ನೆಲಕ್ಕೆ ಅಪ್ಪಳಿಸಿತು ಎಂದು ಡಿಆರ್‌ಡಿಒ ಮೂಲಗಳು ಮಾಹಿತಿ ನೀಡಿವೆ.

ವಿಮಾನವು ರಡಾರ್‌ ಸಂಪರ್ಕ ಕಡೆದುಕೊಂಡ ತಕ್ಷಣವೇ ಡಿಆರ್‌ಡಿಒ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಆ ವೇಳೆಗಾಗಲೇ ಜೋಡಿ ಚುಕ್ಕೇನಹಳ್ಳಿಯ ರೈತ ಆನಂದಪ್ಪ ಎಂಬುವರ ಅಡಿಕೆ ತೋಟದಲ್ಲಿ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ವಿಮಾನ ಸಂಪೂರ್ಣ ಛಿದ್ರಗೊಂಡಿದೆ.

ADVERTISEMENT

‘ಡಿಫೆನ್ಸ್‌ ಎಕ್ಸ್‌ಪೊ 2014’ ರಲ್ಲಿ ಮೊದಲ ಬಾರಿಗೆ ರುಸ್ತುಂ–2 ಅನ್ನು ಡಿಆರ್‌ಡಿಒ ಪ್ರದರ್ಶನಕ್ಕಿಟ್ಟಿತ್ತು. 2018 ರ ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಚಳ್ಳಕೆರೆಯ ವೈಮಾನಿಕ ಪರೀಕ್ಷಾ ವಲಯದಲ್ಲಿ(ಎಟಿಆರ್‌) ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.

‘ರುಸ್ತುಂ–2’ ಮಧ್ಯಮ ಎತ್ತರದಲ್ಲಿ ಸುದೀರ್ಘ ಅವಧಿ ಹಾರಾಟ ನಡೆಸುವ ಮಾನವರಹಿತ ವಿಮಾನ. ಭಾರತೀಯ ಸೇನಾ ಪಡೆಗಳು ಈಗ ಸೇವೆಯಲ್ಲಿರುವ ‘ಹೆರಾನ್‌’ ಯುಎವಿ ಬದಲಿಗೆ ರುಸ್ತುಂ –2 ಅನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದೆ.

ಭಾರತೀಯ ಸೇನಾ ಪಡೆಗಳಿಗಾಗಿ 24 ಗಂಟೆಗಳ ಕಾಲ ಸುದೀರ್ಘವಾಗಿ ವಿಚಕ್ಷಣಾ ಕಾರ್ಯಕ್ಕೆ ಬಳಸಲು ರುಸ್ತುಂ –2 ಅಭಿವೃದ್ಧಿಪಡಿಸಲಾಗಿದೆ. ಇದು ವಿವಿಧ ಬಗೆಯ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ಸಿಂಥೆಟಿಕ್‌ ಅಪರ್ಚರ್‌ ರಡಾರ್‌, ಎಲೆಕ್ಟ್ರಾನಿಕ್‌ ಇಂಟೆಲಿಜನ್ಸ್‌ ಸಿಸ್ಟಮ್ಸ್‌ ಮತ್ತು ಸಿಚು ಯೇಷನಲ್‌ ಅವೇರ್‌ನೆಸ್‌ ಪೇಲೋಡ್‌ ಮುಖ್ಯವಾದವು.

ಬೆಂಗಳೂರಿನಲ್ಲಿರುವ ಏರೋನಾ ಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ ಮೆಂಟ್‌(ಎಡಿಇ) ಈ ಯುಎವಿಯನ್ನು ಅಭಿವೃದ್ಧಿಪಡಿಸಿದೆ. ತಪಸ್‌–ಬಿಎಚ್‌–201ಗೆ ರುಸ್ತುಂ ಎಂದು ಹೆಸರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.