
ನೆಲಮಂಗಲ: ರೈತರಿಗೆ ಹಂಚಿಕೆಯಾಗಬೇಕಾಗಿದ್ದ ಯೂರಿಯಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಲಯದ (ಡಿಆರ್ ಐ) ಅಧಿಕಾರಿಗಳು ದಾಳಿ ಮಾಡಿ, 1,90,125 ಕೆ.ಜಿ ಯೂರಿಯಾವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಗೆಜ್ಜಗದಹಳ್ಳಿ ಶಿವನಪುರದಲ್ಲಿ ಸಲೀಂ ಖಾನ್ ಎಂಬುವವರಿಗೆ ಸೇರಿದ ಗೋದಾಮನ್ನು, ಕೇರಳ ಮೂಲದ ತಜೀರ್ ಖಾನ್ ₹ 40 ಸಾವಿರ ಬಾಡಿಗೆಗೆ ಪಡೆದಿದ್ದರು. ಕೇರಳದಿಂದ ಯೂರಿಯಾವನ್ನು ಅಕ್ರಮವಾಗಿ ಇಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಕೇಂದ್ರ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ವಿತರಣೆಯಾಗುತ್ತಿದ್ದ 45 ಕೆ.ಜಿ ತೂಕದ ಹಳದಿಬಣ್ಣದ ಚೀಲವನ್ನು ಬಿಚ್ಚಿ, 50 ಕೆಜಿ. ಬಿಳಿ ಬಣ್ಣದ ಚೀಲಗಳಿಗೆ ತುಂಬಿ ತಮಿಳುನಾಡಿಗೆ ಅಕ್ರಮವಾಗಿ ರವಾನಿಸಲಾಗುತ್ತಿತ್ತು. ತಮಿಳುನಾಡಿನಲ್ಲಿ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಇಲ್ಲಿಂದ ರವಾನಿಯಾಗುತ್ತಿದೆ ಎಂಬ ಮಾಹಿತಿ ದೊರೆತಿತ್ತು.
ಕೇಂದ್ರ ಸರ್ಕಾರವು ₹2,321 ಮುಖ ಬೆಲೆಯ ಯೂರಿಯಾಗೆ ₹2,054 ಸಬ್ಸಿಡಿ ನೀಡಿ, ₹267ಗೆ ರೈತರಿಗೆ ನೀಡಲಾಗುತ್ತಿದೆ. ಅಕ್ರಮ ದಾಸ್ತಾನು ಮೂಲಕ ₹2,500ಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.