ADVERTISEMENT

ಮದ್ಯದ ಮತ್ತು: ಪ್ರಾಣಕ್ಕೆ ಕುತ್ತು

ಮದ್ಯ ಕುಡಿದು ವಾಹನ ಚಾಲನೆ ಅಪಾಯಕಾರಿ: 2018ರ ಡಿ.31ರ ರಾತ್ರಿ 667 ಪ್ರಕರಣ

ಸಂತೋಷ ಜಿಗಳಿಕೊಪ್ಪ
Published 28 ಡಿಸೆಂಬರ್ 2019, 22:36 IST
Last Updated 28 ಡಿಸೆಂಬರ್ 2019, 22:36 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಕಡೆಯೂ ಈ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ನಗರದಲ್ಲಿ ಡಿ.31ರಂದು ರಾತ್ರಿ ಸಂತೋಷ ಕೂಟಗಳಲ್ಲಿ ಮದ್ಯ ಸೇವಿಸಿ ನಶೆಯಲ್ಲಿ ವಾಹನ ಚಲಾಯಿಸುವವರು ತಾವೂ ಅಪಾಯಕ್ಕೆ ಸಿಲುಕುವುದಲ್ಲದೇ ಅಮಾಯಕರ ಜೀವದ ಜತೆಯೂ ಆಟವಾಡುತ್ತಾರೆ.

ಪಾನಮತ್ತ ಚಾಲಕರ ತಪ್ಪಿನಿಂದಾಗಿ ನಡೆಯುವ ಅಪಘಾತಗಳಿಂದ ಆಗುವ ಹಾನಿ ಅಷ್ಟಿಷ್ಟಲ್ಲ. ತಪ್ಪೇ ಮಾಡದವರೂ ಅಂತಹ ಚಾಲಕರಿಂದಾಗಿ ಸಾವು–ನೋವು ಅನುಭವಿಸಬೇಕಾಗುತ್ತದೆ. ಅಂತಹ ಚಾಲಕರು ತಮ್ಮನ್ನು ನಂಬಿದವರೂ ಬದುಕಿನುದ್ದಕ್ಕೂ ನೋವಿನಲ್ಲೇ ನರಳುವಂತೆ ಮಾಡುತ್ತಾರೆ. ಎಷ್ಟೇ ಜಾಗೃತಿ ನಡೆಸಿದರೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವ ಪ್ರಕರಣಗಳು ತಹಬಂದಿಗೆ ಬರುತ್ತಿಲ್ಲ.

2018ರ ಡಿ. 31ರಂದು ರಾತ್ರಿ ನಗರದಲ್ಲಿ ಸಂಚಾರ ಪೊಲೀಸರು, ಮದ್ಯ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಸಿಕ್ಕಿಬಿದ್ದ 667 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ವಾಹನಗಳನ್ನು ಜಪ್ತಿ ಮಾಡಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಿ ಚಾಲಕರು ವಾಹನಗಳನ್ನು ಬಿಡಿಸಿಕೊಂಡು ಹೋಗಿದ್ದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ವಿದ್ಯಾರ್ಥಿಗಳಿಬ್ಬರ ದುರ್ಮರಣ: 2018ರ ರಾತ್ರಿಹೊಸ ವರ್ಷಾಚರಣೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ದುರ್ಮರಣಕ್ಕೀಡಾಗಿದ್ದರು. ಉಳ್ಳಾಲ ಸಮೀಪದ ಮಂಗನಹಳ್ಳಿ ವೃತ್ತ ಹಾಗೂ ಮೈಕೊ ಲೇಔಟ್ ಬಳಿಯ ವಿಜಯಾ ಬ್ಯಾಂಕ್ ಬಡಾವಣೆಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದವು.

‘ಕುಡಿದ ಅಮಲಿನಲ್ಲಿ ಕೆಲವರು ವ್ಹೀಲಿಂಗ್ ಕೂಡ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ಅಪಘಾತ ಉಂಟು ಮಾಡಿ ತಮ್ಮ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಮದ್ಯದ ಅಮಲಿನಲ್ಲಿ ಸಂಭವಿಸಿದ ಅಪಘಾತಗಳ ವಿವರ ಆಯಾ ಠಾಣೆಯಲ್ಲಿ ಲಭ್ಯವಿದ್ದು, ಅದನ್ನು ಕಲೆಹಾಕಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಈ ಬಾರಿ ಮತ್ತೆ ಹೊಸ ವರ್ಷ ಸ್ವಾಗತಿಸಲು ನಗರ ಸಜ್ಜಾಗಿದೆ. ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಸೇರಿ ಹಲವೆಡೆ ವಿಶೇಷ ಸಂತೋಷ ಕೂಟಗಳನ್ನು ಏರ್ಪಡಿಸಲಾಗಿದೆ. ಅಂದು ರಾತ್ರಿ ಪಾನಮತ್ತ ಚಾಲಕರ ಪತ್ತೆಗಾಗಿ ಸಂಜೆಯಿಂದ ನಸುಕಿನವರೆಗೂ ಸಂಚಾರ ಪೊಲೀಸರು ಕೂಡ ವಿಶೇಷ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ.

‘ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ಹಲವರು ಪಾನಮತ್ತರಾಗಿ ವಾಹನ ಓಡಿಸುತ್ತಿದ್ದಾರೆ. ಇಂಥವರಿಂದಲೇ ಅಪಘಾತಗಳು ಸಂಭವಿಸುತ್ತಿವೆ. ಅದರಿಂದ ಅಮಾಯಕರು ನೋವು ಅನುಭವಿಸುತ್ತಿದ್ದಾರೆ. ಕೆಲವರು ಪ್ರಾಣವನ್ನೇ ಕೆಳದುಕೊಂಡಿದ್ದಾರೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನದಲ್ಲಿ ಸಂತೋಷ ಕೂಟಕ್ಕೆ ಹೋಗುವುದಿದ್ದರೆ, ತಮ್ಮ ಚಾಲಕ ಮದ್ಯ ಕುಡಿಯದಂತೆ ನೋಡಿಕೊಳ್ಳಬೇಕು. ಚಾಲಕನೂ ಮದ್ಯ ಕುಡಿದು ವಾಹನ ಓಡಿಸಿದರೆ ಎಲ್ಲರೂ ಅಪಾಯ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಪಾರ್ಟಿಗೆ ಹೋಗಿ ಮದ್ಯಪಾನ ಮಾಡುವವರು ಸಾರ್ವಜನಿಕ ಸಾರಿಗೆ ಬಳಸುವುದು ಒಳ್ಳೆಯದು. ಇದರಿಂದ ಅವರೂ ಸುರಕ್ಷಿತವಾಗಿ ಮನೆಗೆ ತಲುಪಬಹುದು. ಅವರಿಂದಾಗಿ ಬೇರೆಯವರಿಗೂ ತೊಂದರೆ ಆಗುವುದೂ ತಪ್ಪುತ್ತದೆ’ ಎಂದು ಅವರು ತಿಳಿಸಿದರು.

ಹೋಟೆಲ್‌ಗೆ ಕಾರು ನುಗ್ಗಿಸಿದ್ದ
ಪಾನಮತ್ತ ಚಾಲಕನೊಬ್ಬ ಎಚ್‌ಎಸ್‌ಆರ್‌ ಲೇಔಟ್‌ 7ನೇ ಹಂತದ 17ನೇ ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹೋಟೆಲ್‌ಗೆ ನುಗ್ಗಿಸಿದ್ದ. ಫುಟ್‌ಪಾತ್‌ ಮೇಲೆ ಹೊರಟಿದ್ದ ಹಾಗೂ ಪಕ್ಕದಲ್ಲಿ ನಿಂತಿದ್ದ ಏಳು ಮಂದಿ ಮೇಲೆಯೇ ಕಾರು ಹರಿದಿತ್ತು. ಅವರೆಲ್ಲರಿಗೂ ಇಂದಿಗೂ ನೋವುಅನುಭವಿಸುತ್ತಿದ್ದಾರೆ.

ವೈದ್ಯನಿಂದ ಬಾಲಕನ ಪ್ರಾಣ ಹೋಯ್ತು
ಪ್ರತಿಷ್ಠಿತ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞನೇ ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದ. 17 ವರ್ಷದ ಬಾಲಕನಿಗೆ ಗುದ್ದಿಸಿ ಆತನ ಸಾವಿಗೆ ಕಾರಣನಾಗಿದ್ದ.

ಹಳೇ ಏರ್‌ಪೋರ್ಟ್‌ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಮದುವೆ ಹಾಗೂ ಸಮಾರಂಭಗಳಲ್ಲಿ ಹೂವಿನ ಅಲಂಕಾರ ಮಾಡುವ ಅರೆಕಾಲಿಕ ಕೆಲಸ ಮಾಡುತ್ತಿದ್ದ ಬಾಲಕನ ಸಾವಿನಿಂದ ಆತನ ಕುಟುಂಬ ಇಂದಿಗೂ ಯಾತನೆ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.