ADVERTISEMENT

ಆರ್ಥಿಕ ನೆರವು: ಚಾಲಕರಿಗೆ ಕನ್ನಡಿಯೊಳಗಿನ ಗಂಟು

ಚಾಲಕರಿಗೆ ₹5000 ನೆರವು ಘೋಷಣೆ * ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಯೇ ಇಲ್ಲ

ಗುರು ಪಿ.ಎಸ್‌
Published 15 ಮೇ 2020, 19:11 IST
Last Updated 15 ಮೇ 2020, 19:11 IST
   

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದೇ ಕಂತಿನಲ್ಲಿ ₹5 ಸಾವಿರ ನೆರವು ನೀಡುವುದಾಗಿ ಸರ್ಕಾರ ಘೋಷಿಸಿ ವಾರವಾದರೂ, ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಈವರೆಗೆ ಅಪ್‌ಲೋಡ್‌ ಮಾಡಿಲ್ಲ. ನೆರವಿನ ನಿರೀಕ್ಷೆಯಲ್ಲಿ ಲಕ್ಷಾಂತರ ಚಾಲಕರು ಸೈಬರ್‌ ಕೇಂದ್ರಗಳತ್ತ ಎಡತಾಕುತ್ತಿದ್ದಾರೆ.

‘₹5 ಸಾವಿರ ಕೊಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದಾಗ ಸಮಾಧಾನ ಆಗಿತ್ತು. ಚಾಲನಾ ಪರವಾನಗಿ, ಬ್ಯಾಡ್ಜ್‌ ಎಲ್ಲ ನನ್ನ ಬಳಿ ಇದೆ. ಆದರೆ, ಯಾರಿಗೆ ಅರ್ಜಿ ಸಲ್ಲಿಸಬೇಕು, ಯಾವ ದಾಖಲೆಗಳು ಬೇಕು ಎಂಬ ಬಗ್ಗೆ ಯಾರೂ ಮಾಹಿತಿ ಕೊಡುತ್ತಿಲ್ಲ. ಪೋರ್ಟಲ್‌ನ ಯಾವ ವಿಭಾಗದಲ್ಲಿ ಅರ್ಜಿ ಸಿಗುತ್ತದೆ ಎನ್ನುವುದೂ ಗೊತ್ತಾಗುತ್ತಿಲ್ಲ’ ಎಂದು ಟ್ಯಾಕ್ಸಿ ಚಾಲಕ ಡಿ. ಕಿರಣ್‌ ಅಳಲು ತೋಡಿಕೊಂಡರು.

‘ರಾಜ್ಯದಲ್ಲಿ ಅಂದಾಜು 7.5 ಲಕ್ಷ ಚಾಲಕರಿದ್ದಾರೆ. ಅವರು ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ಸರ್ಕಾರ ಈ ನೆರವು ಘೋಷಿಸಿದೆ. ಆದರೆ, ವಾರವಾದರೂ ಈ ಬಗ್ಗೆ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ನೆರವು ಸಿಗದೆ, ಮೂರು ತಿಂಗಳ ನಂತರ ಹಣ ಬಂದರೆ ಏನು ಪ್ರಯೋಜನ’ ಎಂದು ಪ್ರಶ್ನಿಸುತ್ತಾರೆ ಆಟೊ ಚಾಲಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಮೀನಾಕ್ಷಿ ಸುಂದರಂ.

ADVERTISEMENT

‘ಹಣ ಯಾರಿಗೆ ನೀಡಬೇಕು ಎಂಬ ಬಗ್ಗೆ ಸರ್ಕಾರದ ಬಳಿ ನಿರ್ದಿಷ್ಟ ದತ್ತಾಂಶವೇ ಇಲ್ಲ. ಪೋರ್ಟಲ್‌ನಲ್ಲಿ ರಾಜ್ಯದ 30 ಜಿಲ್ಲೆಗಳ ಚಾಲಕರು ಹೆಸರು ನೋಂದಾಯಿಸಿ, ವಿವರ ದಾಖಲಿಸಬೇಕು. ನಂತರ, ಸರ್ಕಾರಅರ್ಹರ ಪಟ್ಟಿ ಸಿದ್ಧ ಮಾಡಿ, ಅವರ ಬ್ಯಾಂಕ್‌ ಖಾತೆಗೆ ಹಣ ಹಾಕಲು ಸಾಕಷ್ಟು ಸಮಯ ಹಿಡಿಯುತ್ತದೆ. ಪೂರ್ವಸಿದ್ಧತೆ ಮಾಡಿಕೊಳ್ಳದೆ ಈ ರೀತಿ ಘೋಷಣೆಗಳನ್ನು ಹೊರಡಿಸಿದರೆ ಸಾಮಾನ್ಯ ಜನ ತೊಂದರೆಗೀಡಾಗಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಸೇವಾ ಸಿಂಧು ಪೋರ್ಟಲ್‌ನಲ್ಲಿ 16 ಇಲಾಖೆಗಳ ಕಾರ್ಯ ಚಟುವಟಿಕೆ ನಡೆಯುತ್ತದೆ. ಎಲ್ಲವೂ ನಿಧಾನಗತಿಯಲ್ಲಿ ಸಾಗುತ್ತಿದೆ. ನೆರವಿಗಾಗಿ ಜನ ಪ್ರಯತ್ನಿಸಬೇಕು. ಆದರೆ, ಅದು ಸಿಗಬಾರದು ಎಂಬ ರೀತಿಯಲ್ಲಿ ಪೋರ್ಟಲ್‌ ಕೆಲಸ ಮಾಡುತ್ತಿದೆ. ಚಾಲಕರನ್ನು, ಕಾರ್ಮಿಕರನ್ನು ಅಮಾನವೀಯವಾಗಿ ನೋಡುವ ಕ್ರಮ ಇದು’ ಎಂದು ಸಿಐಟಿಯು ಕಾರ್ಯದರ್ಶಿ ಮಹಾಂತೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಇನ್ನೂ ಯಾವುದೇ ಪ್ರಕ್ರಿಯೆ ಆರಂಭವಾಗದಿರುವುದು ನೋಡಿದರೆ, ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲ ಎನಿಸುತ್ತದೆ’ ಎಂದರು.

‘ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ’

‘ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಚಾಲಕರಿಗೆ ಹೇಳಿರುವುದು ನಿಜ. ಆದರೆ, ಈ ಕುರಿತು ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಈ ಕುರಿತು ಘೋಷಣೆಯಾಗಿದೆಯೇ ವಿನಾ, ಅಧಿಕೃತ ಆದೇಶ ಹೊರಡಿಸಿಲ್ಲ’ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೋರ್ಟಲ್‌ನಲ್ಲಿ ಈ ಕುರಿತ ಅರ್ಜಿಯನ್ನು ಅಪ್‌ಲೋಡ್‌ ಮಾಡಿಲ್ಲ. ಯಾವ ಮಾನದಂಡಗಳ ಆಧಾರದಲ್ಲಿ ನೆರವು ನೀಡಬೇಕು ಎಂದು ಮಾಹಿತಿ ಕೇಳಿದ್ದೇವೆ. ಅಂತಿಮ ಆದೇಶ ಹೊರಬೀಳುತ್ತಿದ್ದಂತೆ ಈ ಕುರಿತ ಪ್ರಕ್ರಿಯೆ ಪ್ರಾರಂಭಿಸು ತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.