ಜಿಕೆವಿಕೆ
ಯಲಹಂಕ: ‘ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬೆಳೆಗಳ ಕುರಿತು ಅಧ್ಯಯನ ಮಾಡುವುದರ ಜೊತೆಗೆ ಡ್ರೋನ್ ತಂತ್ರಜ್ಞಾನವನ್ನು ಬಳಸಿದರೆ ಸಾರ್ಥಕತೆ ಪಡೆಯಲು ಸಾಧ್ಯ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ ಹೇಳಿದರು.
ಕೃಷಿ ವಿಶ್ವವಿದ್ಯಾಲಯ, ಏರೋಸೈಟ್ ಟೆಕ್ನಾಲಜೀಸ್ ಹಾಗೂ ಕ್ರಾಫ್‌ಲೈಫ್ ಇಂಡಿಯಾ ಆಶ್ರಯದಲ್ಲಿ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ಡ್ರೋನ್ ದೀದಿ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇವಲ ಡ್ರೋನ್ ಬಳಕೆದಾರರಾಗದೆ ಕೃಷಿಯಲ್ಲಿರುವ ಮೂಲಭೂತ ವಿಷಯಗಳನ್ನು ತಿಳಿದುಕೊಂಡು ಕೃಷಿ ವಿಸ್ತರಣಾ ಕಾರ್ಯಕರ್ತರಾಗಬೇಕು. ಆಗ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಹಾಗೂ ರೈತರ ವಿಶ್ವಾಸಗಳಿಸಿ ಅವರಿಗೆ ಅಗತ್ಯವಾದ ತಾಂತ್ರಿಕ ಸಲಹೆಗಳನ್ನು ನೀಡಲು ಅನುಕೂಲವಾಗುತ್ತದೆ’ ಎಂದರು.
ಡ್ರೋನ್ ಬಳಸುವವರಿಗೆ ಪ್ರತಿ ಹಂತದಲ್ಲೂ ಕೃಷಿಯ ಬಗ್ಗೆ ಜ್ಞಾನವಿರಬೇಕು. ಎಷ್ಟು ಎತ್ತರದಲ್ಲಿ ಹಾರಿಸಿ, ಬೆಳೆಗಳಿಗೆ ನೀರು ಮತ್ತು ಔಷಧಿಗಳನ್ನು ಸಿಂಪಡಿಸಬೇಕು. ಬೆಳೆವಾರು, ಪ್ರಮಾಣ, ಸಮಯ ಈ ಎಲ್ಲ ಅಂಶಗಳ ಬಗ್ಗೆ ತಿಳಿದುಕೊಂಡು ಸಿಂಪಡಣೆ ಕಾರ್ಯ ಕೈಗೊಳ್ಳಬೇಕಾದುದು ಅತಿಮುಖ್ಯ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ಭೂಮಿಗೆ ಬಳಸುತ್ತಿರುವ ರಸಗೊಬ್ಬರಗಳಲ್ಲಿ ಶೇ 40ರಷ್ಟು ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ಡ್ರೋನ್ ಬಳಕೆಯ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎಚ್.ಎಸ್. ಶಿವರಾಮು ಮಾತನಾಡಿ, ‘ನಗರೀಕರಣದಿಂದಾಗಿ ನಾವು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿಯಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
ರಾಷ್ಟ್ರೀಯ ಸಂಜೀವಿನಿ ಕೌಶಲಾಭಿವೃದ್ಧಿ ಮಿಷನ್‌ನ ಮುಖ್ಯಸ್ಥ ವೇಣುಗೋಪಾಲ್ ಎಸ್.ಆರ್, ಏರೋಸೈಟ್ ಟೆಕ್ನಾಲಜೀಸ್ ಸಿಇಒ ಗೋಪಿನಾಥ್ ರಾಮಚಂದ್ರನ್, ಒಣಬೇಸಾಯ ಪ್ರಾಯೋಜನೆಯ ಮುಖ್ಯಸ್ಥ ಡಾ.ಮೂಡಲಗಿರಿಯಪ್ಪ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 100ಕ್ಕೂ ಹೆಚ್ಚು ಮಹಿಳೆಯರಿಗೆ ಡ್ರೋನ್ ಉಪಯೋಗಿಸುವ ಹಾಗೂ ರಾಸಾಯನಿಕಗಳ ಪರಿಣಾಮಕಾರಿ ಬಳಕೆಯ ಕುರಿತು ತರಬೇತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.