ADVERTISEMENT

'ಜನಪದ ನಾಯಕ ಡಾ.ರಾಜಕುಮಾರ್' ಪುಸ್ತಕ ಬಿಡುಗಡೆ

‘ರಾಜಕೀಯ ನಾಯಕರು ಅಂತರಂಗದಲ್ಲಿ ರಕ್ಕಸರು’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:10 IST
Last Updated 30 ಡಿಸೆಂಬರ್ 2018, 20:10 IST
ಕಾರ್ಯಕ್ರಮದಲ್ಲಿ (ಎಡದಿಂದ) ತಾರಾ ಅನೂರಾಧ, ರಾಘವೇಂದ್ರ ರಾಜಕುಮಾರ್‌, ಎಚ್‌.ಎಸ್‌.ರಾಘವೇಂದ್ರರಾವ್‌, ಬರಗೂರು ರಾಮಚಂದ್ರಪ್ಪ ಇದ್ದರುಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ತಾರಾ ಅನೂರಾಧ, ರಾಘವೇಂದ್ರ ರಾಜಕುಮಾರ್‌, ಎಚ್‌.ಎಸ್‌.ರಾಘವೇಂದ್ರರಾವ್‌, ಬರಗೂರು ರಾಮಚಂದ್ರಪ್ಪ ಇದ್ದರುಪ್ರಜಾವಾಣಿ ಚಿತ್ರ   

ಬೆಂಗಳೂರು: 'ಇಂದಿನ ರಾಜಕೀಯ ಪ್ರತಿನಿಧಿಗಳು ಸಾರ್ವಜನಿಕವಾಗಿ ವಿನಯವಾಗಿ ವರ್ತಿಸುತ್ತಾರೆ. ಆದರೆ, ಅಂತರಂಗದಲ್ಲಿ ರಕ್ಕಸರಂತೆ, ಮಾಯಾವಾದಿಯಂತೆ ಇರುತ್ತಾರೆ' ಎಂದು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜನ ಪ್ರಕಾಶನ ಭಾನುವಾರ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ಅವರು ರಚಿಸಿದ 'ಜನಪದ ನಾಯಕ ಡಾ.ರಾಜಕುಮಾರ್' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಜಕುಮಾರ್‌ ಅವರು ರಾಜಕಾರಣಿಗಳಂತೆ ಎಂದೂ ವರ್ತಿಸಿಲ್ಲ. ಅಂತರಂಗ ಹಾಗೂ ಬಹಿರಂಗದಲ್ಲಿಯೂ ಅವರು ಸರಳತೆ, ವಿಧೇಯತೆ ಹಾಗೂ ವಿನಯದ ಹಾದಿಯಲ್ಲಿ ಬೆಳೆದು ಮೇರು ವ್ಯಕ್ತಿಯಾದರು. ಅಂಥವರ ಸ್ಥಾನಗಳನ್ನು ತುಂಬಲು ಯುವ ಪೀಳಿಗೆ ಮುಂದಾಗಬೇಕು' ಎಂದು ಸಲಹೆ ನೀಡಿದರು.

ADVERTISEMENT

ನಟ ರಾಘವೇಂದ್ರ ರಾಜಕುಮಾರ್, ‘ಅಪ್ಪಾಜಿ ಅವರನ್ನು ಕೇವಲ ಕಲಾವಿದ ಮೇರುನಟ ಎಂಬ ಗರಡಿಯೊಳಗೆ ಬಂಧಿಸಲಾಗದು. ಈ ಎಲ್ಲ ಎಲ್ಲೆಗಳನ್ನು ಮೀರಿದ ವ್ಯಕ್ತಿತ್ವ ಅವರದ್ದು’ ಎಂದು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ರಾಜಕುಮಾರ್ ಅಂತರಂಗದಲ್ಲಿ ಶಾಸ್ತ್ರಕ್ಕೆ ಸಿಗದ ಧಾರ್ಮಿಕತೆಯನ್ನು ಬೆಳೆಸಿಕೊಂಡವರು. ಆದರೆ, ಇಂದಿನ ಧರ್ಮಶಾಸ್ತ್ರವು ಇನ್ನೊಬ್ಬರ ವಿರುದ್ಧ ಬಳಸುವ ಶಸ್ತ್ರವಾಗಿದೆ’ ಎಂದರು.

ಶಮಿತಾ ಮಲ್ನಾಡ್ ಮತ್ತು ತಂಡದವರು ರಾಜಕುಮಾರ್‌ ಸಿನಿಮಾಗಳ ಗೀತೆಗಳನ್ನು ಹಾಡಿದರು.

‘ಕುವೆಂಪುಗೆ ಕೊಡಿ ಎಂದಿದ್ದರು’

ನಟಿ ತಾರಾ ಅನೂರಾಧ, ‘ರಾಜಕುಮಾರ್ ಅವರಿಗೆ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿತ್ತು. ಆದರೆ, ರಾಜಕುಮಾರ್‌,ಮೊದಲು ಕುವೆಂಪು ಅವರಿಗೆ ಪ್ರಶಸ್ತಿ ಕೊಡಿ ಎಂದಿದ್ದರು. ಕುವೆಂಪು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿಮಗೆ (ರಾಜಕುಮಾರ್‌ಗೆ) ಈ ಪ್ರಶಸ್ತಿ ಕೊಟ್ಟು ನಂತರ ಅವರಿಗೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಅದಕ್ಕೊಪ್ಪದ ಅವರು, ‘ನೀವು ಆರೋಗ್ಯವಾಗಿದ್ದೀರಲ್ಲವೇ. ಅವರಲ್ಲಿಗೆ (ಕುವೆಂಪು ಬಳಿಗೆ) ಹೋಗಿ ಪ್ರಶಸ್ತಿ ನೀಡಿ’ ಎಂದು ಸೂಚಿಸಿದ್ದರು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.