ADVERTISEMENT

ಬೆಂಗಳೂರು | ಹೈಡ್ರೊ ಗಾಂಜಾ: ನೇತ್ರ ತಜ್ಞ ಬಂಧನ

ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ- ಕ್ರಿಪ್ಟೊ ಕರೆನ್ಸಿ ಬಳಸಿ ಡ್ರಗ್ಸ್ ಖರೀದಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 0:30 IST
Last Updated 28 ಫೆಬ್ರುವರಿ 2024, 0:30 IST
ಅಂಚೆ ಮೂಲಕ ತರಿಸಿದ್ದ ಹೈಡ್ರೊ ಗಾಂಜಾ
ಅಂಚೆ ಮೂಲಕ ತರಿಸಿದ್ದ ಹೈಡ್ರೊ ಗಾಂಜಾ   

ಬೆಂಗಳೂರು: ಭಾರತೀಯ ಅಂಚೆ ಮೂಲಕ ಹೈಡ್ರೊ ಗಾಂಜಾ ಪಾರ್ಸೆಲ್ ತರಿಸುತ್ತಿದ್ದ ಆರೋಪದಡಿ ನೇತ್ರ ತಜ್ಞ ಡಾ. ನಿಖಿಲ್‌ ಗೋಪಾಲಕೃಷ್ಣನ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನಿಖಿಲ್, ವೈದ್ಯಕೀಯ ಸ್ನಾತಕೋತ್ತರ  ವ್ಯಾಸಂಗ  ಮಾಡುತ್ತಿದ್ದಾರೆ. ಡ್ರಗ್ಸ್ ಸಾಗಣೆ ಹಾಗೂ ಸೇವನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ನಿಖಿಲ್‌ ಅವರನ್ನು ಬಂಧಿಸಲಾಗಿದೆ. ಸದ್ಯ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡಿನ ನಿಖಿಲ್, ತಂದೆ– ತಾಯಿ ಜೊತೆ ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ತಂದೆ–ತಾಯಿ ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದಾರೆ. ಯಶವಂತಪುರ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ ನಿಖಿಲ್, ಅಲ್ಲಿಂದಲೇ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಇವರು ಡ್ರಗ್ಸ್ ವ್ಯಸನಿ ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ವಾಸವಿದ್ದ ಫ್ಲ್ಯಾಟ್‌ನಲ್ಲಿಯೇ ನಿಖಿಲ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು’ ಎಂದು ಹೇಳಿದರು.

ADVERTISEMENT

ಕ್ರಿಪ್ಟೊ ಕರೆನ್ಸಿ ಬಳಸಿ ಖರೀದಿ: ‘ಟೆಲಿಗ್ರಾಂ ಆ್ಯಪ್‌ನಲ್ಲಿರುವ ಗ್ರೂಪ್‌ವೊಂದರ ಮೂಲಕ ನೆದರ್‌ಲೆಂಡ್ಸ್‌ನ ಪೆಡ್ಲರ್‌ವೊಬ್ಬನನ್ನು ಸಂಪರ್ಕಿಸಿದ್ದ ನಿಖಿಲ್, ಕ್ರಿಪ್ಟೊ ಕರೆನ್ಸಿ ಮೂಲಕ ಹೈಡ್ರೊ ಗಾಂಜಾ ಖರೀದಿಸಿದ್ದರು. ಅದೇ ಪೆಡ್ಲರ್‌, ಭಾರತಕ್ಕೆ ಹೈಡ್ರೊ ಗಾಂಜಾ ಕಳಿಸಿದ್ದ. ನಂತರ, ಅದೇ ಗಾಂಜಾ ಅಂಚೆ ಮೂಲಕ ಬೆಂಗಳೂರಿಗೆ ಬಂದಿತ್ತು’ ಎಂದು ತಿಳಿಸಿದರು.

‘ನೆದರ್‌ಲೆಂಡ್ಸ್‌ನಿಂದ ಅಂಚೆ ಮೂಲಕ ಬಂದಿದ್ದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದಾಗ, ಪಾರ್ಸೆಲ್‌ನಲ್ಲಿ ಡ್ರಗ್ಸ್ ಪತ್ತೆಯಾಯಿತು. ನಿಖಿಲ್‌ ಗೋಪಾಲಕೃಷ್ಣನ್ ಅವರ ಹೆಸರಿಗೆ ಪಾರ್ಸೆಲ್‌ ಬಂದಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮತ್ತಷ್ಟು ಮಾಹಿತಿ ಲಭ್ಯವಾಯಿತು. ಆರೋಪಿಯಿಂದ ₹3 ಲಕ್ಷ ಮೌಲ್ಯದ 42 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಆರೋಪಿ ಎಷ್ಟು ಬಾರಿ ಗಾಂಜಾ ತರಿಸಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಜೊತೆಗೆ, ನೆದರ್‌ಲೆಂಡ್ಸ್‌ನಿಂದ ಗಾಂಜಾ ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ನೇತ್ರ ತಜ್ಞ ಡ್ರಗ್ಸ್ ವ್ಯಸನಿ ಆಗಿದ್ದು ಹೇಗೆ? ಈತನ ಪರಿಚಯಸ್ಥರು ಯಾರಾದರೂ ವ್ಯಸನಿಗಳು ಇದ್ದಾರೆಯೇ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಡ್ರಗ್ಸ್ ಜಾಲದಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಜಾಲವನ್ನು ಬುಡಸಮೇತ ಕಿತ್ತೆಸೆಯಲು ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ
ಬಿ. ದಯಾನಂದ್ ಬೆಂಗಳೂರು ಪೊಲೀಸ್ ಕಮಿಷನರ್
‘ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ’
‘ಬಂಧಿತ ನಿಖಿಲ್‌ ಗೋಪಾಲಕೃಷ್ಣನ್ ಕರಾವಳಿ ಭಾಗದಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು. ಚಿನ್ನದ ಪದಕ ಸಹ ಪಡೆದಿದ್ದರು. ನಂತರ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ವಿವಿಧ ಆಸ್ಪತ್ರೆಗಳಿಗೂ ಭೇಟಿ ನೀಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.