ADVERTISEMENT

ಡ್ರಗ್ಸ್ ಮಾರಾಟ: ಯುವತಿ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 16:00 IST
Last Updated 15 ನವೆಂಬರ್ 2022, 16:00 IST

ಬೆಂಗಳೂರು: ನಗರದಲ್ಲಿ ವ್ಯವಸ್ಥಿತ ಜಾಲದ ಮೂಲಕ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಯುವತಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಎಸ್‌. ವಿಷ್ಣುಪ್ರಿಯಾ ಹಾಗೂ ಸಹಚರ ಸಿಗಿಲ್ ವರ್ಗೀಸ್ ಬಂಧಿತರು. ಇವರಿಂದ 11.37 ಗ್ರಾಂ ತೂಕದ 23 ಎಂಡಿಎಂಎ ಮಾತ್ರೆಗಳು, 0.53 ಗ್ರಾಂ ತೂಕದ ಎಲ್‌ಎಸ್‌ಡಿ ಕಾಗದ ಚೂರುಗಳು, ಎರಡು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹ 5 ಲಕ್ಷ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ಆರೋಪಿಗಳು, ಪರಿಚಯಸ್ಥ ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.

ADVERTISEMENT

‘ಕೇರಳ, ಮಂಗಳೂರು ಹಾಗೂ ಆಫ್ರಿಕಾ ಪೆಡ್ಲರ್‌ಗಳ ಜೊತೆ ಆರೋಪಿಗಳು ಒಡನಾಟ ಹೊಂದಿದ್ದರು. ಅವರಿಂದಲೇ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಇತರರು ಆರೋಪಿಗಳ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು’ ಎಂದು ಹೇಳಿದರು.

ಜಾಮೀನು ಮೇಲೆ ಹೊರಬಂದು ಕೃತ್ಯ: ‘ಬಂಧಿತ ಆರೋಪಿಗಳು, ಈ ಹಿಂದೆಯೇ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಹುಳಿಮಾವು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಜೈಲಿಗೆ ಹೋಗಿದ್ದ ಆರೋಪಿಗಳು, ಜಾಮೀನು ಪಡೆದು ಹೊರಬಂದು ಕೃತ್ಯ ಮುಂದುವರಿಸಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಆರೋಪಿ ವಿಷ್ಣುಪ್ರಿಯಾ, ಡ್ರಗ್ಸ್ ವ್ಯಸನಿ ಆಗಿರುವ ಅನುಮಾನವಿದೆ. ಅಕ್ರಮವಾಗಿ ಹಣ ಸಂಪಾದಿಸುವುದಕ್ಕಾಗಿ ಈಕೆ, ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದಳು. ಹಲವು ಸಹಚರರು ಕೃತ್ಯಕ್ಕೆ ಸಹಕರಿಸುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.