ADVERTISEMENT

ಮಗನಿಗೆ ಬಟ್ಟೆ ಬ್ಯಾಗ್‌ನಲ್ಲಿ ಡ್ರಗ್ಸ್ ಬಚ್ಚಿಟ್ಟು ಕೊಟ್ಟ ತಾಯಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:17 IST
Last Updated 17 ಜೂನ್ 2022, 16:17 IST
ಕಪ್ಪು ಪ್ಲ್ಯಾಸ್ಟಿಕ್‌ನಲ್ಲಿ ಸುತ್ತಿ ಬಟ್ಟೆ ಬ್ಯಾಗ್‌ನಲ್ಲಿ ಬಚ್ಚಿಡಲಾಗಿದ್ದ ಡ್ರಗ್ಸ್
ಕಪ್ಪು ಪ್ಲ್ಯಾಸ್ಟಿಕ್‌ನಲ್ಲಿ ಸುತ್ತಿ ಬಟ್ಟೆ ಬ್ಯಾಗ್‌ನಲ್ಲಿ ಬಚ್ಚಿಡಲಾಗಿದ್ದ ಡ್ರಗ್ಸ್   

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ಮಗನಿಗೆ ಬಟ್ಟೆ ಬ್ಯಾಗ್‌ನಲ್ಲಿ ಡ್ರಗ್ಸ್ ಬಚ್ಚಿಟ್ಟು ಕೊಡುತ್ತಿದ್ದ ಆರೋಪದಡಿ ಫರ್ವೀನ್ ತಾಜ್ (50) ಎಂಬುವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿಪಾಳ್ಯದ ನಿವಾಸಿ ಫರ್ವೀನ್ ತಾಜ್, ಮಗ ಮೊಹಮ್ಮದ್ ಬಿಲಾಲ್‌ನನ್ನು ಭೇಟಿಯಾಗಲು ಜೂನ್ 13ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಇದೇ ವೇಳೆಯೇ ಅವರನ್ನು ಡ್ರಗ್ಸ್ ಸಮೇತ ಹಿಡಿದಿದ್ದ ಜೈಲು ಸಿಬ್ಬಂದಿ, ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕಾರಾಗೃಹದ ಮುಖ್ಯ ಅಧೀಕ್ಷಕ ಪಿ. ರಂಗನಾಥ್ ನೀಡಿರುವ ದೂರು ಆಧರಿಸಿ ಫರ್ವೀನ್ ಹಾಗೂ ಮಗ ಮೊಹಮ್ಮದ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಫರ್ವೀನ್‌ ತಾಜ್ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಜೈಲಿನಲ್ಲಿರುವ ಮಗನನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಬೇಕಿದೆ’ ಎಂದೂ ತಿಳಿಸಿದರು.

ADVERTISEMENT

₹ 5 ಲಕ್ಷ ಮೌಲ್ಯದ ಡ್ರಗ್ಸ್: ‘ಅಪರಾಧ ಪ್ರಕರಣವೊಂದರಲ್ಲಿ ಮೊಹಮ್ಮದ್ ಬಿಲಾಲ್‌ನನ್ನು ಬಂಧಿಸಿದ್ದ ಕೋಣನಕುಂಟೆ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೈಲಿನಲ್ಲಿರುವ ಈತನನ್ನು ಭೇಟಿಯಾಗಲು ತಾಯಿ ಆಗಾಗ ಜೈಲಿಗೆ ಬಂದು ಹೋಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜೂನ್ 13ರಂದು ಜೈಲಿಗೆ ಬಂದಿದ್ದ ಫರ್ವೀನ್, ಬಟ್ಟೆ ಇರುವುದಾಗಿ ಹೇಳಿ ಮಗನಿಗೆ ಬ್ಯಾಗ್‌ ನೀಡಲು ಮುಂದಾಗಿದ್ದರು. ತಾಯಿ ನಡೆಯಿಂದ ಅನುಮಾನಗೊಂಡ ಸಿಬ್ಬಂದಿ, ಬ್ಯಾಗ್ ಪರಿಶೀಲಿಸಿದ್ದರು. ಅವಾಗಲೇ ಕಪ್ಪು ಬಣ್ಣದ ಪ್ಲಾಸ್ಟಿಕ್‌ನಲ್ಲಿ ಸುತ್ತಿಡಲಾಗಿದ್ದ ₹ 5 ಲಕ್ಷ ಮೌಲ್ಯದ 200 ಗ್ರಾಂ ಹಶೀಷ್ ಡ್ರಗ್ಸ್ ಪತ್ತೆಯಾಗಿದೆ’ ಎಂದೂ ತಿಳಿಸಿವೆ.

‘ಜೈಲಿನಲ್ಲಿ ಹಲವರ ಜೊತೆ ಒಡನಾಟ ಹೊಂದಿರುವ ಮೊಹಮ್ಮದ್, ತಾಯಿಯಿಂದ ಹೊರಗಡೆಯಿಂದ ಡ್ರಗ್ಸ್ ತರಿಸಿಕೊಂಡು ಮಾರುತ್ತಿದ್ದ ಬಗ್ಗೆ ಮಾಹಿತಿ ಇದೆ. ಆತನನ್ನು ಕಸ್ಟಡಿಗೆ ಪಡೆದ ನಂತರವೇ ನಿಖರ ಸಂಗತಿ ತಿಳಿಯಲಿದೆ’ ಎಂದೂ ಹೇಳಿವೆ.

ಬೇರೊಬ್ಬರ ಬ್ಯಾಗ್: ‘ಡ್ರಗ್ಸ್ ಪತ್ತೆಯಾಗುತ್ತಿದ್ದಂತೆ ತಾಯಿ ಫರ್ವೀನ್‌ ತಾಜ್ ಅವರನ್ನು ಜೈಲು ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಬ್ಯಾಗ್‌ ತಮ್ಮದಲ್ಲವೆಂದು ವಾದಿಸಿದ್ದ ಮಹಿಳೆ, ಬೇರೊಬ್ಬರ ಬ್ಯಾಗ್‌ ಎಂಬುದಾಗಿ ಹೇಳಿದ್ದರು. ಠಾಣೆಗೆ ಕರೆ ತಂದಾಗಲೂ ಅದನ್ನೇ ವಾದಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಗನ ಜೊತೆ ಜೈಲಿನಲ್ಲಿರುವ ಸ್ನೇಹಿತನ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರು ಪರಿಚಯವಾಗಿದ್ದರು. ಅದೇ ಸ್ನೇಹಿತನಿಗೆ ಬಟ್ಟೆಗಳನ್ನು ನೀಡುವಂತೆ ಹೇಳಿ ನನಗೆ ಬ್ಯಾಗ್ ಕೊಟ್ಟಿದ್ದರು. ಅದನ್ನೇ ಮಗನ ಕೈಗೆ ಕೊಡಲು ಜೈಲಿಗೆ ಬಂದಿದ್ದೆ. ಅದರಲ್ಲಿ ಡ್ರಗ್ಸ್ ಇರುವ ಮಾಹಿತಿ ನನಗೆ ಗೊತ್ತಿರಲಿಲ್ಲ’ ಎಂಬುದಾಗಿ ತಾಯಿ ಹೇಳಿಕೆ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.