ADVERTISEMENT

ಡ್ರಗ್ಸ್‌ ಮಾರಾಟ | 24 ಮಂದಿ ಬಂಧನ, ₹2.08 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 15:40 IST
Last Updated 9 ಫೆಬ್ರುವರಿ 2026, 15:40 IST
ಆರೋಪಿಗಳಿಂದ ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ವೀಕ್ಷಿಸಿದರು
ಆರೋಪಿಗಳಿಂದ ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ವೀಕ್ಷಿಸಿದರು   

ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಸಂಘಟಿತ ಅಪರಾಧ ದಳ ಕಾರ್ಯಾಚರಣೆ ನಡೆಸಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 24 ಮಂದಿಯನ್ನು ಬಂಧಿಸಿದೆ.

ಕೇರಳ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಬೆಂಗಳೂರು ನಗರದ ಆರೋಪಿಗಳನ್ನು ಬಂಧಿಸಿ, 1 ಕೆ.ಜಿ. 23 ಗ್ರಾಂ ಹೈಡ್ರೋ ಗಾಂಜಾ, 76 ಕೆ.ಜಿ. ಗಾಂಜಾ, 11 ಕೆ.ಜಿ. 600 ಗ್ರಾಂ ಚರಸ್, 121 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಅಂದಾಜು ₹2.08 ಕೋಟಿ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಮಾರಸ್ವಾಮಿ ಲೇಔಟ್‌, ಹೆಬ್ಬಾಳ, ಜೆ.ಸಿ.ನಗರ, ಬಸವನಗುಡಿ, ಗೋವಿಂದರಾಜನಗರ, ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆರೋಪಿಗಳು ಹೈಡ್ರೋ ಗಾಂಜಾ, ಚರಸ್, ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂತು. ಮಾಹಿತಿ ಆಧರಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾತ್ಮೀದಾರರು ತಿಳಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಹೊರ ರಾಜ್ಯದವರು ಸೇರಿ 24 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಯಿತು ಎಂದು ಹೇಳಿದ್ದಾರೆ.

ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ, ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಆರೋಪಿಗಳಿಗೆ ಹೈಡ್ರೋ ಗಾಂಜಾ, ಗಾಂಜಾ, ಚರಸ್ ಮತ್ತು ಎಂಡಿಎಂಎ ಸರಬರಾಜು ಮಾಡಿದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

37 ದಿನದಲ್ಲಿ 178 ಮಂದಿ ಸೆರೆ

ಮಾದಕ ವಸ್ತುಗಳ ಸಾಗಣೆ ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ಅಪರಾಧ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು ಜನವರಿ 1ರಿಂದ ಫೆಬ್ರುವರಿ 7ರ ಅವಧಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ 109 ಪ್ರಕರಣಗಳನ್ನು ದಾಖಲಿಸಿ 179 ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕ ವಸ್ತು ಸೇವಿಸಿದ ಆರೋಪಕ್ಕೆ ಸಂಬಂಧಿಸಿ 839 ಪ್ರಕರಣಗಳು ದಾಖಲಾಗಿದ್ದು 1038 ಆರೋಪಿಗಳನ್ನು ಬಂಧಿಸಲಾಗಿದೆ.

ಗಾಂಜಾ ಹೈಡ್ರೋ ಗಾಂಜಾ ಸಿಂಥೆಟಿಕ್ ಡ್ರಗ್ಸ್‌ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ₹8.19 ಕೋಟಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‌ ಮಾದಕ ವಸ್ತುಗಳ ಬಳಕೆ ಮಾರಾಟ ಮತ್ತು ತಯಾರಿಕೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸುಳಿವು ದೊರೆತರೆ ಕೂಡಲೇ 1908/112 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.