ಬೆಂಗಳೂರು: ಕಳೆದ ತಿಂಗಳಷ್ಟೇ ಡ್ರಗ್ಸ್ ಮಾರಾಟ ಜಾಲವನ್ನು ಭೇದಿಸಿದ್ದ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಪ್ರಕರಣ ಸಂಬಂಧ ‘ಬಿಗ್‌ಬಾಸ್’ ಸ್ಪರ್ಧಿ ಆಡಂ ಪಾಷಾ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಕೇರಳದ ಡಿ. ಅನಿಕಾ ಎಂಬುವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆಕೆ ನೀಡಿದ್ದ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಿರುವ ಅಧಿಕಾರಿಗಳು, ಪ್ರಕರಣದ ವಿಚಾರಣೆಗೆ ಬರುವಂತೆ ಆಡಂ ಪಾಷಾಗೆ ಇತ್ತೀಚೆಗಷ್ಟೇ ನೋಟಿಸ್ ನೀಡಿದ್ದರು.
ನಗರದಲ್ಲಿರುವ ಎನ್‌ಸಿಬಿ ಕಚೇರಿಗೆ ಮಂಗಳವಾರ ಬೆಳಿಗ್ಗೆ ಹಾಜರಾಗಿದ್ದ ಆಡಂ, ಸಂಜೆಯವರೆಗೂ ವಿಚಾರಣೆ ಎದುರಿಸಿದರು. ಪ್ರಕರಣದಲ್ಲಿ ಸಂಗ್ರಹಿಸಿದ್ದ ಪುರಾವೆಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ವಿಚಾರಣೆ ನಡೆಸಿದರು.
ಡಾರ್ಕ್‌ನೆಟ್ ಮೂಲಕ ವಿದೇಶದಿಂದ ಡ್ರಗ್ಸ್ ತರಿಸುತ್ತಿದ್ದ ಪೆಡ್ಲರ್ ಅನಿಕಾ ಜೊತೆಯಲ್ಲಿ ಆಡಂ ಒಡನಾಟ ಹೊಂದಿದ್ದ. ಆಕೆಯಿಂದ ಎಂಡಿಎಂಎ, ಕೊಕೇನ್ ಹಾಗೂ ಎಲ್‌ಎಸ್‌ಡಿ ಸೇರಿದಂತೆ ಹಲವು ಪ್ರಕಾರದ ಡ್ರಗ್ಸ್‌ಗಳನ್ನು ಆಡಂ ಖರೀದಿಸಿದ್ದ ಎಂಬುದಾಗಿ ಗೊತ್ತಾಗಿದೆ.
ರೂಪದರ್ಶಿ, ನೃತಗಾರರಾದ ಆಡಂ ಪಾಷಾ, ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಕೆಲ ತಿಂಗಳ ಹಿಂದಷ್ಟೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಬಿಗ್‌ಬಾಸ್’ ಷೋನಲ್ಲಿ ಸ್ಪರ್ಧಿಯಾಗಿದ್ದರು. ಅವರು, ಡ್ರಗ್ಸ್ ವ್ಯಸನಿ. ಹಲವು ಕಡೆಗಳ ಡ್ರಗ್ಸ್ ಪಾರ್ಟಿಗಳಲ್ಲೂ ಅವರು ಪಾಲ್ಗೊಂಡಿದ್ದರು ಎಂದುಹೇಳಲಾಗಿದೆ.
ವಿಚಿತ್ರ ವರ್ತನೆ:ವಿಚಾರಣೆಗೆ ಬಂದಿದ್ದ ಆಡಂ, ಎನ್‌ಸಿಬಿ ಅಧಿಕಾರಿಗಳ ಎದುರು ಕೈ–ಮೈ ಸನ್ನೆ ಮಾಡಿ ವಿಚಿತ್ರವಾಗಿ ವರ್ತಿಸಿದ್ದಾರೆ ಗೊತ್ತಾಗಿದೆ.ಬಂಧನದ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.