ADVERTISEMENT

₹ 35 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ; ರೌಡಿ, ಯುವತಿಯರು ಬಂಧನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 15:00 IST
Last Updated 11 ಫೆಬ್ರುವರಿ 2021, 15:00 IST
ಜಪ್ತಿ ಮಾಡಲಾದ ಚರಸ್
ಜಪ್ತಿ ಮಾಡಲಾದ ಚರಸ್   

ಬೆಂಗಳೂರು: ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಆರೋಪದಡಿ ಮಂಗಳೂರು ರೌಡಿ, ಇಬ್ಬರು ಯುವತಿಯರು ಸೇರಿದಂತೆ ಆರು ಮಂದಿಯನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರೌಡಿ ಅಸ್ಗರ್ ಅಲಿ, ಅನ್ವರ್ ಸಾದತ್, ಅಬ್ದುಲ್ ಲತೀಫ್, ಮೊಹಮ್ಮದ್ ಹನೀಫ್, ನೇಪಾಳದ ಯುವತಿಯರಾದ ದಿಲ್ ಮಯಾಗ್ರಥಿ, ಮೀನಾ ಬುದ್ದ ಮೊಗ್ರಾ ಬಂಧಿತರು. ಅವರಿಂದ ₹ 35 ಲಕ್ಷ ಮೌಲ್ಯದ 4 ಕೆ.ಜಿ ತೂಕದ ಚರಸ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ನಗರದಲ್ಲಿ ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡಿದ್ದ ರೌಡಿ ಅಸ್ಗರ್ ಅಲಿ, ಅದರ ಮೂಲಕ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಮಾಡಿಸುತ್ತಿದ್ದ. ಉಳಿದೆಲ್ಲ ಆರೋಪಿಗಳು, ಆತನ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದರು. ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ವೇಳೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಗ್ರಾಹಕರಾಗಿದ್ದರು. ಯುವತಿಯರ ಮೂಲಕವೂ ಆರೋಪಿಗಳು ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದರು’ ಎಂದೂ ಹೇಳಿದರು.

‘ಮಂಗಳೂರು ರೌಡಿ ಅಸ್ಗರ್ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಆತ, ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ. ಮಂಗಳೂರಿನಿಂದ ನಗರಕ್ಕೆ ಬಂದು ಡ್ರಗ್ಸ್ ದಂಧೆ ನಡೆಸಲಾರಂಭಿಸಿದ್ದ’ ಎಂದೂ ಸಂದೀಪ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.