ADVERTISEMENT

₹ 40 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ಆಯಿಲ್‌ಗಳ ಬಾಟಲಿಗಳಲ್ಲಿ ಹ್ಯಾಶಿಶ್ ತುಂಬಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಮಾದಕ ವಸ್ತುಗಳು
ಮಾದಕ ವಸ್ತುಗಳು   

ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ ₹ 40 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊರಮಾವು ಬಳಿ ಕೆ.ಚನ್ನಸಂದ್ರ ಎಂಬಲ್ಲಿ ನೆಲೆಸಿರುವ ಕೇರಳದ ವಯನಾಡಿನ ಸಿಂಟೊ ಥಾಮಸ್‌ (35) ಮತ್ತು ದಾಸರಹಳ್ಳಿಯ ಮರಿಯಣ್ಣನಪಾಳ್ಯದಲ್ಲಿ ನೆಲೆಸಿರುವ ತಿರುವನಂತಪುರದ ತಾಜುದ್ದೀನ್‌ ತಲಾತ್‌ (29) ಬಂಧಿತರು.

ಆರೋಪಿಗಳು ತಮ್ಮ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ 4.5 ಕೆ.ಜಿ. ಹ್ಯಾಶಿಶ್ ಆಯಿಲ್‌, 21.5 ಕೆ.ಜಿ. ಗಾಂಜಾ, ಆಯಿಲ್‌ ತುಂಬಿಸಲು ಇಟ್ಟಿದ್ದ 625 ಖಾಲಿ ಡಬ್ಬಗಳು, ಎರಡು ಮೊಬೈಲ್‌ ಮತ್ತು ತೂಕದ ಯಂತ್ರ ಮತ್ತು ₹ 9,300 ನಗದು ಜಪ್ತಿ ಮಾಡಲಾಗಿದೆ.

ADVERTISEMENT

‘ಆರೋಪಿಗಳು ವಿಶಾಖಪಟ್ಟಣದ ಸೆಂಥಿಲ್‌ ಎಂಬಾತನಿಂದ ಕಡಿಮೆ ಬೆಲೆಯಲ್ಲಿ ಸಗಟು ರೂಪದಲ್ಲಿ ಗಾಂಜಾ ಮತ್ತು ಹ್ಯಾಶಿಶ್ ಆಯಿಲ್‌ ಖರೀದಿಸಿ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ತಂದು ಸಂಗ್ರಹಿಸುತ್ತಿದ್ದರು. ಹೀಗೆ ಸಾಗಿಸುವ ಸಂದರ್ಭದಲ್ಲಿ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಪ್ಯಾರಾಚೂಟ್‌ ಆಯಿಲ್‌ಗಳ ಬಾಟಲಿಗಳನ್ನು ಖರೀದಿಸಿ, ಒಳಗೆ ಹ್ಯಾಶಿಶ್‌ ಆಯಿಲ್‌ ತುಂಬಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಹ್ಯಾಶಿಶ್‌ ಆಯಿಲ್‌ನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಸಿ, ಯಾವುದೇ ಅನುಮಾನ ಬರಬಾರದೆಂಬ ಕಾರಣಕ್ಕೆ ಆ ಡಬ್ಬಗಳ ಸುತ್ತ ಎಣ್ಣೆ ಚೆಲ್ಲುತ್ತಿದ್ದರು. ಹೀಗೆ ತುಂಬಿದ ಡಬ್ಬಗಳನ್ನು ಗಿರಾಕಿಗಳಿಗೆ ತಲಾ
₹300ಕ್ಕೆ ಮಾರುತ್ತಿದ್ದರು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.