ADVERTISEMENT

ಪಾನಮತ್ತ ಕೀನ್ಯಾ ಯುವತಿ ದಾಂದಲೆ

ಮುಂದುವರಿದ ವಿದೇಶಿಗರ ಉಪಟಳ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 18:49 IST
Last Updated 7 ಡಿಸೆಂಬರ್ 2018, 18:49 IST

ಬೆಂಗಳೂರು: ರಾಜಧಾನಿಯಲ್ಲಿ ವಿದೇಶಿಗರ ಉಪಟಳ ಮುಂದುವರಿದಿದ್ದು, ಬಾಣಸವಾಡಿಯಲ್ಲಿ ಕೀನ್ಯಾದ ಯುವತಿಯೊಬ್ಬಳು ಸ್ಥಳೀಯರೊಂದಿಗೆ ದಾಂದಲೆ ಮಾಡಿದ್ದಾಳೆ. ಮತ್ತೊಂದೆಡೆ, ಮಾದಕವಸ್ತು ಮಾರುತ್ತಿದ್ದ ಇಬ್ಬರು ‘ಅಕ್ರಮ ವಾಸಿ’ಗಳನ್ನು ಕೋರಮಂಗಲ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಕಮ್ಮನಹಳ್ಳಿಯ ಟ್ವೀನ್ಸ್ ಪಬ್ ಎದುರು ಗುರುವಾರ ರಾತ್ರಿ ಪಾನಮತ್ತ ಯುವತಿ, ರಂಪಾಟ ನಡೆಸಿದ್ದಳು. ಸ್ಥಳೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಳು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಯತ್ನಿಸಿದ್ದಳು’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಆಫ್ರಿಕಾ ದೇಶದ ಜನ ಗುಂಪು ಗುಂಪಾಗಿ ನಿತ್ಯವೂ ಪಬ್‌ಗೆ ಬರುತ್ತಾರೆ. ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಾರೆ. ಗುರುವಾರ ರಾತ್ರಿ ಪಬ್‌ಗೆ ಬಂದಿದ್ದ ಯುವತಿ, ಪಾನಮತ್ತಳಾಗಿ ಪಬ್‌ನಲ್ಲಿದ್ದವರ ಜೊತೆ ಜಗಳ ಮಾಡಿಕೊಂಡು ಹೊರಗೆ ಬಂದಿದ್ದಳು. ನಂತರ, ನಡುರಸ್ತೆಯಲ್ಲೇ ರಂಪಾಟ ಮುಂದುವರಿಸಿದ್ದಳು. ಅದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ ಬೈದಿದ್ದಳು. ಸ್ಥಳೀಯರ ಸಹಾಯದಿಂದ ಹೊಯ್ಸಳ ವಾಹನದ ಸಿಬ್ಬಂದಿ, ಯುವತಿಯನ್ನು ಠಾಣೆಗೆ ಕರೆತಂದಿದ್ದರು. ಆಕೆಗೆ ಎಚ್ಚರಿಕೆ ನೀಡಿ ಶುಕ್ರವಾರ ಬೆಳಿಗ್ಗೆ ಬಿಟ್ಟು ಕಳುಹಿಸಲಾಯಿತು’ ಎಂದರು.

ADVERTISEMENT

ಠಾಣೆಯಿಂದ ಹೊರಗೆ ಬರುತ್ತಿದ್ದಂತೆ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಯುವತಿ, ‘ಪೊಲೀಸರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸುತ್ತಿದ್ದಾಳೆ ಎಂದು ಹೇಳಿದರು.

ಅಕ್ರಮ ವಾಸಿಗಳಿಬ್ಬರ ಸೆರೆ: ದೇಶದಲ್ಲಿ ಅಕ್ರಮವಾಗಿ ನೆಲೆಸಿ ಮಾದಕ ವಸ್ತು ಮಾರುತ್ತಿದ್ದ ಆರೋಪದಡಿ ಆಫ್ರಿಕಾದ ಇಬ್ಬರು ಪ್ರಜೆಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾನ್ ಕೆನಡಿ (37) ಹಾಗೂಕೆನಾನ್ ಔಡ್ಲೈ (32) ಬಂಧಿತರು. ಇನ್ನೊಬ್ಬ ಆರೋಪಿ ಘಾನಾ ದೇಶದ ಜೋನಾಥನ್ ಎಂಬಾತ ಪರಾರಿಯಾಗಿದ್ದಾನೆ. ಮಾದಕ ವಸ್ತು ಮಾರಾಟಕ್ಕೆ ಸಹಕರಿಸುತ್ತಿದ್ದ ನಗರದ ಬಿನ್ನಿ ಮಿಲ್‌ನ ಕೇಶವನಗರದ ನಿವಾಸಿ ಆದಿತ್ಯ (22) ಎಂಬಾತನನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಹೆಣ್ಣೂರಿನ ಮುದ್ದಣ್ಣ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಿರುವ ಆರೋಪಿಗಳ ವೀಸಾ ಅವಧಿ 2016ರ ಏಪ್ರಿಲ್ 12ರಂದೇ ಮುಗಿದಿದೆ. ತಮ್ಮದೇ ದೇಶದ ಪ್ರಜೆಗಳ ಜೊತೆ ವಾಸವಿರುವ ಆರೋಪಿಗಳು, ಮಾದಕ ವಸ್ತು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಅವರಿಂದ ₹1 ಲಕ್ಷ ಮೌಲ್ಯದ 21.59 ಗ್ರಾಂ ಎಂ.ಡಿ.ಎಂ.ಎ ಜಪ್ತಿ ಮಾಡಲಾಗಿದೆ’ ಎಂದು ಕೋರಮಂಗಲ ಪೊಲೀಸರು ಹೇಳಿದರು.

‘ಕೋರಮಂಗಲದ 8ನೇ ಹಂತದಲ್ಲಿರುವ ಬಿಬಿಎಂಪಿ ಉದ್ಯಾನದ ಬಳಿ ಆರೋಪಿಗಳು ಮಾದಕವಸ್ತು ಮಾರಾಟ ಮಾಡಲು ಬಂದಿದ್ದರು. ಅದೇ ವೇಳೆ ದಾಳಿ ಮಾಡಿ ಅವರನ್ನು ಸೆರೆಹಿಡಿಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.