
ಆರೋಪಿ ಅಬ್ದುಲ್ ರೆಹಮಾನ್ ಹಾಗೂ ಜಖಂ ಆಗಿರುವ ಆಡಿ ಕಾರು
ಸಂಗ್ರಹ ಚಿತ್ರಗಳು
ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ವಿದ್ಯಾರ್ಥಿಯೊಬ್ಬ ವೇಗವಾಗಿ, ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಮೃತಪಟ್ಟಿರುವ ಘಟನೆ ನಗರದ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್-7ರಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಿವಾಸಿ ಸಂತೋಷ್ (28) ಎಂದು ಗುರುತಿಸಲಾಗಿದೆ. ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು, ರಾಜೀವ್ ಗಾಂಧಿ ನಗರದ ಪಿಜಿಯಲ್ಲಿದ್ದರು.
ಆಗಿದ್ದೇನು?
ಎಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ, ಲೇಔಟ್‌ನ 27ನೇ ಕ್ರಾಸ್ ಬಳಿ ತಡರಾತ್ರಿ ಘಟನೆ ನಡೆದಿದೆ. ಆ ಸಂದರ್ಭದಲ್ಲಿ ಸಂತೋಷ್ ಅವರು, ಸ್ನೇಹಿತರೊಂದಿಗೆ ಊಟ ಮುಗಿಸಿ ಪಿಜಿಗೆ ನಡೆದುಕೊಂಡು ಹೋಗುತ್ತಿದ್ದರು.
23 ವರ್ಷದ ಅಬ್ದುಲ್ ರೆಹಮಾನ್ ಎಂಬವರು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದ ಆಡಿ ಕಾರು ಸಂತೋಷ್ ಅವರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸಂತೋಷ್ ಅವರು ಸಾಕಷ್ಟು ದೂರ ಗಾಳಿಯಲ್ಲಿ ಹಾರಿಹೋಗಿ ಬಿದ್ದಿದ್ದರು. ಆದರೂ, ಕಾರು ನಿಲ್ಲಿಸದ ಆರೋಪಿ, ರಸ್ತೆ ಬದಿ ನಿಂತಿದ್ದ ಮತ್ತೆರಡು ವಾಹನಗಳಿಗೂ ಗುದ್ದಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿ ಬಿಬಿಎ ವಿದ್ಯಾರ್ಥಿ
ಆರೋಪಿ ಅಬ್ದುಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಬಿಎ ವಿದ್ಯಾರ್ಥಿಯಾಗಿರುವ ಆತ, ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್-7 ನಿವಾಸಿ.
ಕಾರು, ಆರೋಪಿಯ ತಾಯಿಯ ಹೆಸರಿನಲ್ಲಿದೆ. ಅಪಘಾತದ ವೇಳೆ ಅಬ್ದುಲ್ ಜೊತೆ, ಆತನ ಸ್ನೇಹಿತನೂ ಇದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
'ಆರೋಪಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದ. ಮದ್ಯ ಸೇವನೆ ಮಟ್ಟವನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಕೊಂಡಿದ್ದೇವೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.