ADVERTISEMENT

ದೂಳು... ಇದು ಸಾರಕ್ಕಿ ಗೋಳು

ಮುಗಿಯದ ಹೂಳೆತ್ತುವ ಕಾಮಗಾರಿ * ಓಡಾಡಲು ಹಿಂಜರಿಯುತ್ತಿರುವ ಸಾರ್ವಜನಿಕರು

ಪ್ರಸನ್ನ ಕುಮಾರ ಪಿ.ಎನ್.
Published 12 ಜನವರಿ 2019, 20:00 IST
Last Updated 12 ಜನವರಿ 2019, 20:00 IST
ರಸ್ತೆಯಲ್ಲಿರುವ ದೂಳು
ರಸ್ತೆಯಲ್ಲಿರುವ ದೂಳು   

ಬೆಂಗಳೂರು: ದೂಳು...ದೂಳು...ದೂಳು... ಮನೆಯೊಳಗೆ ದೂಳು. ನಿಲ್ಲಿಸಿರುವ ವಾಹನದೊಳಗೆ ದೂಳು. ಓಡಾಡಿದರೂ ದೂಳು. ನಿಂತರೂ ಕುಂತರೂ ದೂಳು... ಇದು ಪುಟ್ಟೇನಹಳ್ಳಿ, ಜರಗನಹಳ್ಳಿ, ಸಾರಕ್ಕಿ, ಅಷ್ಟಲಕ್ಷ್ಮಿ ಲೇಔಟ್‌ನ ನಿವಾಸಿಗಳು ನಿತ್ಯ ಅನುಭವಿಸುವ ಗೋಳು.

ಜೆ.ಪಿ.ನಗರದ ಸಾರಕ್ಕಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿರುವ ಕಾರಣ ಕೆರೆಯ ಸುತ್ತಲೂ ವಾಸವಿರುವ ಸಾರ್ವಜನಿಕರು ದೂಳಿನ ಸ್ನಾನ ಮಾಡುತ್ತಿದ್ದಾರೆ.

ಹೂಳೆತ್ತುವ ಕಾಮಗಾರಿ ರಾತ್ರಿ 10 ಗಂಟೆಯ ನಂತರ ಶುರುವಾಗಲಿದೆ. ಸುಮಾರು 20ಕ್ಕೂ ಹೆಚ್ಚು ಟಿಪ್ಪರ್‌ಗಳು ಕೆರೆಯಲ್ಲಿನ ಹೂಳನ್ನು ಹೊತ್ತೊಯ್ಯುತ್ತವೆ. ಈ ಲಾರಿಗಳ ಸಂಚಾರದಿಂದ ರಸ್ತೆಗಳು ಹೇಗಾಗಿವೆ ಎಂದರೆ, ದೂಳಿನಿಂದಲೇ ರಸ್ತೆ ನಿರ್ಮಿಸಲಾಗಿದೆ ಎಂಬ ಅನುಮಾನ ಮೂಡಿಸುತ್ತದೆ.

ADVERTISEMENT

ರಸ್ತೆಯ ತುಂಬಾ ಪುಡಿ, ಪುಡಿ ಮರಳು. ಕಾಲಿಟ್ಟರೆ ಮಣ್ಣಿನೊಳಗೆ ಕಾಲು ಹೂತು ಹೋಗುತ್ತದೆ. ನೀರು ಬಿದ್ದರೆ ರಸ್ತೆಯಲ್ಲ ಕೆಸರಿನ ಗದ್ದೆಯಂತಾಗುತ್ತದೆ. ಆಗಲೂ ಕಾಲಿಡಲಾಗುವುದಿಲ್ಲ. ಈ ದೂಳಿನ ಕಿರಿಕಿರಿ ಸಹಿಸಿಕೊಳ್ಳವುದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಿವಾಸಿಗಳು.

ಇಲ್ಲಿನ ರಸ್ತೆಗಳಲ್ಲಿ ಸಹಜವಾಗಿ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಿಗ್ಗೆಯಿಂದ ರಾತ್ರಿವರೆಗೆ ವಾಹನಗಳ ಓಡಾಟದಿಂದ ಏಳುವ ದೂಳು ಈ ಪ್ರದೇಶವನ್ನು ಮುಸುಕು ಆವರಿಸಿದಂತೆ ಭಾಸವಾಗುತ್ತದೆ. ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಮುಖಗವಸು ಹಾಕಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ವಾತಾವರಣ ಮಾಲಿನ್ಯದಿಂದ ಕೂಡಿರುವುದರಿಂದ ಶ್ವಾಸಕೋಶ, ಚರ್ಮರೋಗದ ಸಮಸ್ಯೆ ಕೂಡ ಈ ಭಾಗದ ಜನರನ್ನು ಬಾಧಿಸಲು ಆರಂಭಿಸಿದೆ.

ಗೋಡೆಗಳ ಬಣ್ಣವೇ ಬದಲು: ಮನೆಯ ಆವರಣದಲ್ಲಿ ನಿಲ್ಲಿಸುವ ಬೈಕ್‌, ಕಾರು, ಆಟೊಗಳ ಮೇಲೆ ದೂಳಿನ ಪದರು ಎದ್ದು ಕಾಣುತ್ತದೆ. ಅವುಗಳನ್ನು ಕಂಡರೆ ಎಷ್ಟೋ ವರ್ಷಗಳಿಂದ ನಿಲ್ಲಿಸಿದ ಭ್ರಮೆ ಮೂಡಿಸುತ್ತವೆ. ಕಚೇರಿಗೆ ತೆರಳಲು ವಾಹನಗನ್ನು ನಿತ್ಯ ತೊಳೆಯಬೇಕು.ಮನೆಯ ಗೋಡೆಗಳಿಗೆ ಪ್ರತಿದಿನ ನೀರು ಹಾಕುತ್ತೇವೆ. ಆದರೆ, ಸಂಜೆಯೊಳಗೆ ದೂಳು ಆವರಿಸಿ ಅದರ ಬಣ್ಣವೇ ಬದಲಾಗಿರುತ್ತದೆ’ ಎಂದು ಅವರು ನೋವು ತೋಡಿಕೊಳ್ಳುತ್ತಾರೆ.

ಕಾಮಗಾರಿಗೆ ಶೀಘ್ರ ಮುಕ್ತಿ ಸಿಗಲಿ
‘ಕೆರೆ ಹೂಳೆತ್ತುವ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ದೂಳಿನಲ್ಲಿ ಓಡಾಡಲು ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಪೂರ್ಣಗೊಂಡರೆ ಒಳ್ಳೆಯದು. ಬಳಿಕ ಸುಸಜ್ಜಿತ ಉದ್ಯಾನ ನಿರ್ಮಾಣವಾಗಲಿದೆ. ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ. ದೋಣಿ ವಿಹಾರವನ್ನು ಆರಂಭಿಸಲಾಗುತ್ತದೆ’ ಎಂದು ಜರಗನಹಳ್ಳಿ ವಾರ್ಡ್‌ ಸದಸ್ಯೆ ಶೋಭಾ ಮುನಿರಾಮ್ ಹೇಳಿದರು.

ಮೇ–ಜೂನ್‌ಗೆ ಅಂತ್ಯ
‘ಬಿಡಿಎ ಈ ಕೆರೆಯನ್ನು ಕಳೆದ ವರ್ಷ ಬಿಬಿಎಂಪಿಗೆ ಹಸ್ತಾಂತರಿಸಿದೆ. 2017ರ ಜುಲೈನಲ್ಲಿ ಈ ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೇ, ಜೂನ್‌ವರೆಗೂ ಕಾಯಬೇಕು’ ಎಂದು ಎಂಜಿನಿಯರ್‌ರೊಬ್ಬರು ಹೇಳಿದರು.

ಅಂಕಿ ಅಂಶಗಳು
* 84 ಎಕರೆ –ಸಾರಕ್ಕಿ ಕೆರೆಯ ವಿಸ್ತೀರ್ಣ
* ₹ 5.7 ಕೋಟಿ –ಬಿಡಿಎಯಿಂದ ಬಿಬಿಎಂಪಿಗೆ ವರ್ಗಾಯಿಸಿದಾಗ ಕೆರೆ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ
*₹ 5 ಕೋಟಿ –ಬಿಡಿಎ ಅಡಿಯಲ್ಲಿ ಕಾಮಗಾರಿ ನಡೆಯುವಾಗ ಬಿಡುಗಡೆಯಾದ ವೆಚ್ಚ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.