ಬೆಂಗಳೂರು: ನಿಷೇಧಿತ ಇ–ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂಗಡಿ ಮಾಲೀಕ ಮೊಹಮ್ಮದ್ ಮಜರ್(38), ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್‌ನ ಮೂರನೇ ಕ್ರಾಸ್ ನಿವಾಸಿ ಮುಜೀಬ್–ಉರ್ ರೆಹಮಾನ್(21), ಶಾಮಣ್ಣ ಗಾರ್ಡನ್‌ನ ಒಂಬತ್ತನೇ ಮುಖ್ಯರಸ್ತೆಯ ನಿವಾಸಿ ಉಮೇಜ್ ಖಾನ್(20) ಹಾಗೂ ವಿಲ್ಸನ್ ಗಾರ್ಡನ್ ಒಂಬತ್ತನೇ ಕ್ರಾಸ್ ನಿವಾಸಿ ಮೊಹಮ್ಮದ್ ಜವಾದ್ ಉಲ್ಲಾ(53) ಬಂಧಿತರು.
‘ಪಾದರಾಯನಪುರದ 11ನೇ ಕ್ರಾಸ್‌ನ ಅರ್ಬನ್ ಕ್ಲಾತಿಂಗ್ ಕಟ್ಟಡದ ಪಕ್ಕದ ಮಳಿಗೆಯಲ್ಲಿ ಮೊಹಮ್ಮದ್ ಮಜರ್ ಸೇರಿದಂತೆ ನಾಲ್ವರು ಆರೋಪಿಗಳು, ಕೇಂದ್ರ ಸರ್ಕಾರ ನಿಷೇಧಿಸಿರುವ ಇ–ಸಿಗರೇಟ್ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ₹1.50 ಲಕ್ಷ ಮೌಲ್ಯದ 106 ಇ–ಸಿಗರೇಟ್, ಎರಡು ಚಾರ್ಜರ್ ಹಾಗೂ 12 ಪುನರ್ ತುಂಬುವ ಸಾಧನಗಳನ್ನು (ರೀಪಿಲ್ಸ್) ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಇ–ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರವು ಹಿಂದೆಯೇ ನಿಷೇಧ ಮಾಡಿತ್ತು. ಆದರೂ, ಆರೋಪಿಗಳು ಹೊರ ರಾಜ್ಯದಿಂದ ಇ–ಸಿಗರೇಟ್ ತಂದು ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಪಿ.ಜಿ ನಿವಾಸಿಗಳು ಹಾಗೂ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಇ–ಸಿಗರೇಟ್ ಪೂರೈಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.