ADVERTISEMENT

ಇ–ಕಾಮರ್ಸ್‌, ಕ್ವಿಕ್‌ ಕಾಮರ್ಸ್‌ ವಾಹನ ನಿಯಂತ್ರಿಸಿ: ಹೆದ್ದಾರಿ ಸಚಿವಾಲಯ

ಎಲ್ಲ ರಾಜ್ಯಗಳ ಆಯುಕ್ತರಿಗೆ ಪತ್ರ ಬರೆದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:27 IST
Last Updated 23 ಜೂನ್ 2025, 15:27 IST
ಸಿ. ಮಲ್ಲಿಕಾರ್ಜುನ
ಸಿ. ಮಲ್ಲಿಕಾರ್ಜುನ   

ಬೆಂಗಳೂರು: ಇ–ಕಾಮರ್ಸ್‌ ಮತ್ತು ಕ್ವಿಕ್‌ ಕಾಮರ್ಸ್‌ ಡೆಲಿವರಿ ದ್ವಿಚಕ್ರ ವಾಹನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲ ರಾಜ್ಯಗಳ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದೆ.

ರಾಜ್ಯಸಭೆ ಸದಸ್ಯ ಮಹಾರಾಷ್ಟ್ರದ ಧನಂಜಯ್‌ ಮಹಾದಿಕ್ ಅವರು ವಾಣಿಜ್ಯ ಉದ್ದೇಶಕ್ಕೆ ಬಳಸುವ ಖಾಸಗಿ ವಾಹನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ವಾಣಿಜ್ಯ ಕಾರಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ವಿಮೆ, ತೆರಿಗೆ ಮತ್ತು ನೋಂದಣಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಿಯಮಗಳು ಉಲ್ಲಂಘನೆಯಾಗುತ್ತಿದೆ. ಡೆಲಿವರಿ ಸಿಬ್ಬಂದಿ ಸಿಗ್ನಲ್‌ ಉಲ್ಲಂಘನೆ, ಅತಿಯಾದ ವೇಗ, ಏಕಮುಖರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾವಣೆ, ಪಾದಚಾರಿ ಮಾರ್ಗಗಳ ಮೇಲೆ ವಾಹನ ಚಲಾಯಿಸುವುದರಿಂದ ಸಾರ್ವಜನಿಕರಿಗೆ ಸುರಕ್ಷತೆ ಇಲ್ಲದಾಗಿದೆ. ಡೆಲಿವರಿ ಸಿಬ್ಬಂದಿ ನಿಗದಿತ ಕಾಲಮಿತಿಯಲ್ಲಿ ಹೋಗಬೇಕಿರುವುದರಿಂದ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿರುವುದರಿಂದ ನಗರಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದರು.

ADVERTISEMENT

ರಸ್ತೆ ಸಾರಿಗೆ ನಿಯಮ ಉಲ್ಲಂಘನೆಗಳು ಆಯಾ ರಾಜ್ಯ ಇಲ್ಲವೇ ಕೇಂದ್ರಾಡಳಿತ ಸರ್ಕಾರಗಳ ಸಾರಿಗೆ ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳ ಆಯುಕ್ತರಿಗೆ ಸೂಚನೆ ನೀಡಿದೆ.

ನಿಯಮ ಉಲ್ಲಂಘಿಸಿದರೆ ಕ್ರಮ

‘ಕೇಂದ್ರದ ಸಚಿವಾಲಯದಿಂದ ಪತ್ರ ಬಂದಿದೆ. ರಸ್ತೆ ಸಾರಿಗೆ ನಿಯಮ ಉಲ್ಲಂಘಿಸಿದರೆ ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ದ್ವಿಚಕ್ರ ವಾಹನಗಳಲ್ಲಿ 25 ಕೆ.ಜಿ.ವರೆಗೆ ಸಾಮಗ್ರಿಗಳನ್ನು ಸಾಗಿಸಲು ಅವಕಾಶವಿದೆ. ಇ–ಕಾಮರ್ಸ್‌ ಮತ್ತು ಕ್ವಿಕ್‌ ಕಾಮರ್ಸ್‌ ಡೆಲಿವರಿ ವಾಹನಗಳ ಮೇಲೆಯೇ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳಿಲ್ಲ. ಕೇಂದ್ರದಿಂದ ಮಾರ್ಗಸೂಚಿ ಬರಲಿ ಎಂದು ಕಾಯುತ್ತಿದ್ದೇವೆ’ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.