‘ಇ–ಸ್ವತ್ತು
ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಭೂ ಪರಿವರ್ತನೆ ಆದೇಶ ಪಡೆಯದ ಮತ್ತು ನಕ್ಷೆ ಅನುಮೋದನೆ ಇಲ್ಲದೆ ನಿರ್ಮಿಸಿದ ಬಡಾವಣೆಗಳ ಸ್ವತ್ತುಗಳಿಗೆ ಇನ್ನು ಮುಂದೆ ಇ–ಸ್ವತ್ತು ದಾಖಲೆ ದೊರಕುವುದಿಲ್ಲ. ಇದರಿಂದ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳ ನೋಂದಣಿಗೆ ಕಡಿವಾಣ ಬೀಳಲಿದೆ.
ಈಗ ಚಾಲ್ತಿಯಲ್ಲಿರುವ ಇ–ಸ್ವತ್ತು ತಂತ್ರಾಂಶದಲ್ಲಿನ ನ್ಯೂನತೆಗಳನ್ನೇ ಅಸ್ತ್ರ ಮಾಡಿಕೊಂಡು ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳು ಮತ್ತು ಸಮರ್ಪಕ ದಾಖಲೆಗಳಿಲ್ಲದ ಆಸ್ತಿಗಳಿಗೆ ಇ–ಸ್ವತ್ತು ದಾಖಲೆ ಪಡೆಯಲಾಗುತ್ತಿತ್ತು. ಅದರ ಆಧಾರದಲ್ಲೇ ಅಂತಹ ಆಸ್ತಿಗಳ ನೋಂದಣಿಯೂ ನಡೆಯುತ್ತಿತ್ತು. ಇದೇ 30 ರಿಂದ ಹೊಸ ತಂತ್ರಾಂಶದ ಬಳಕೆಗೆ ಚಾಲನೆ ದೊರಕಲಿದ್ದು, ನಿಖರ ದಾಖಲೆ ಒದಗಿಸದ ಆಸ್ತಿಗಳಿಗೆ ಇ–ಸ್ವತ್ತು ಸೃಜಿಸಲು ಅವಕಾಶವೇ ಇರುವುದಿಲ್ಲ.
ಭೂ ಪರಿವರ್ತನೆ ಆದೇಶ ಪಡೆಯದೆ, ನಕ್ಷೆ ಅನುಮೋದನೆಯೂ ಇಲ್ಲದೆ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನಗಳ ನೋಂದಣಿ ನಿಯಂತ್ರಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರ ಅನುಸಾರ, 2013ರಲ್ಲಿ ಇ–ಸ್ವತ್ತು ತಂತ್ರಾಂಶ ರೂಪಿಸಲಾಗಿತ್ತು. 11 ವರ್ಷಗಳಿಂದ ಹಳೆಯ ತಂತ್ರಾಂಶದ ಮೂಲಕವೇ ಇ–ಸ್ವತ್ತು ದಾಖಲೆಗಳನ್ನು ಸೃಜಿಸಿ, ವಿತರಿಸಲಾಗುತ್ತಿತ್ತು.
ಹಳೆಯ ತಂತ್ರಾಂಶದಲ್ಲಿ ಆಸ್ತಿಗೆ ಸಂಬಂಧಿಸಿದ ತೆರಿಗೆ ಬೇಡಿಕೆ, ತೆರಿಗೆ ಪಾವತಿ, ಬಾಕಿ ಕುರಿತ ಮಾಹಿತಿ, ಆಸ್ತಿಯ ಫೋಟೊ, ಆಸ್ತಿಯು ಮಾಲೀಕರ ಸ್ವಾಧೀನಕ್ಕೆ ಹೇಗೆ ಬಂದಿದೆ ಎಂಬುದನ್ನು ದೃಢಪಡಿಸುವ ದಾಖಲೆಗಳು, ಭೂ ಪರಿವರ್ತನೆ ಮತ್ತು ಬಡಾವಣೆ ನಕ್ಷೆ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳಿಲ್ಲದೆಯೂ ಇ–ಸ್ವತ್ತು ನೀಡಲು ಅವಕಾಶವಿತ್ತು. ಈ ಅವಕಾಶ ಬಳಸಿಕೊಂಡು ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಇ–ಸ್ವತ್ತು ಸೃಜಿಸಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು.
‘ಅಕ್ರಮಗಳಿಗೆ ಕಡಿವಾಣ’:
‘ದಾಖಲೆಗಳ ಕೊರತೆ ಇದ್ದರೂ ಇ–ಸ್ವತ್ತು ವಿತರಣೆಗೆ ಅವಕಾಶ ಇದ್ದ ಕಾರಣದಿಂದ ಅಕ್ರಮಗಳು ನಡೆಯುತ್ತಿದ್ದವು. ಹೊಸ ತಂತ್ರಾಂಶದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇ–ಸ್ವತ್ತು ಪಡೆಯಲು ಸಾಧ್ಯವಿಲ್ಲ. ಇದರಿಂದ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ’ ಎನ್ನುತ್ತಾರೆ ಇ–ಸ್ವತ್ತು ವಿಷಯ ತಜ್ಞರಾಗಿರುವ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆ.ಜಿ. ಜಗದೀಶ್.
ಮೂರು ದಿನ ಸ್ಥಗಿತ: ಹಳೆಯ ತಂತ್ರಾಂಶವನ್ನು ಸ್ಥಗಿತಗೊಳಿಸಿ, ಹೊಸ ತಂತ್ರಾಂಶವನ್ನು ಚಾಲನೆಗೆ ತರಲು ಇ–ಸ್ವತ್ತು ವಿತರಣೆಯನ್ನು ಶನಿವಾರದಿಂದ ಸೋಮವಾರದವರೆಗೆ ಸ್ಥಗಿತಗೊಳಿಸಲಾಗಿದೆ.
ಏನೇನು ಬದಲಾವಣೆ?
ಇ–ಸ್ವತ್ತು ವಿತರಿಸುವ ಹೊಸ ತಂತ್ರಾಂಶದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಆಸ್ತಿಯು ಯಾವ ವಲಯದಲ್ಲಿದೆ ಎಂಬುದನ್ನು ನಿಖರವಾಗಿ ತಿಳಿಸಬೇಕು. ಆಸ್ತಿಯ ಮೇಲಿನ ಹಕ್ಕು ಯಾವ ಸ್ವರೂಪದಲ್ಲಿ ಬಂದಿದೆ? ತೆರಿಗೆ ಪಾವತಿಗೆ ಸಂಬಂಧಿಸಿದ ವಿವರ ನಕ್ಷೆ ಅನುಮೋದನೆ ಮತ್ತು ಭೂ ಪರಿವರ್ತನೆ ಕಟ್ಟಡ ನಕ್ಷೆ ಅನುಮೋದನೆಯ ಮಾಹಿತಿಯ ಜತೆ ದಾಖಲೆಗಳನ್ನೂ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ. ಆಸ್ತಿಯ ಮೇಲಿನ ಋಣಭಾರ ಅಡಮಾನ ಸರ್ಕಾರದ ನಿರ್ಬಂಧವಿದ್ದರೆ ಗುತ್ತಿಗೆಗೆ ನೀಡಿದ್ದಲ್ಲಿ ಅದರ ಮಾಹಿತಿ ನ್ಯಾಯಾಲಯದ ತಡೆಯಾಜ್ಞೆಗಳಿದ್ದರೆ ಆ ಬಗ್ಗೆಯೂ ಮಾಹಿತಿ ದಾಖಲಿಸಿ ದಾಖಲೆ ಅಪ್‌ಲೋಡ್ ಮಾಡಬೇಕು. ಗ್ರಾಮ ಠಾಣಾ ಒಳಗಿನ ಜಮೀನುಗಳನ್ನು ಗುರುತಿಸಲು ಇ–ಸ್ವತ್ತು ಕೋರಿದ ಅರ್ಜಿಯನ್ನು ಕಂದಾಯ ಇಲಾಖೆಗೆ ಕಳುಹಿಸಿ ಅಲ್ಲಿಂದ ನಕ್ಷೆ ಪಡೆಯಲಾಗುತ್ತಿತ್ತು. ಈಗ ವಿಳಂಬ ತಡೆಯಲು ದಿಶಾಂಕ್ ಆ್ಯಪ್ ಮೂಲಕ ನೇರವಾಗಿ ಜಮೀನು ಗುರುತಿಸಲು ಅವಕಾಶ ಕಲ್ಪಿಸಲಾಗಿದೆ.
‘ಜನರು ಸರ್ಕಾರ ಇಬ್ಬರಿಗೂ ಅನುಕೂಲ’
‘ಹೊಸ ತಂತ್ರಾಂಶ ಅಳವಡಿಕೆಯಿಂದ ಇ–ಸ್ವತ್ತು ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ. ತೆರಿಗೆ ಸೋರಿಕೆಗೆ ಕಡಿವಾಣ ಬಿದ್ದು ಗ್ರಾಮ ಪಂಚಾಯಿತಿಗಳ ವರಮಾನವೂ ಹೆಚ್ಚಲಿದೆ. ಹೊಸ ತಂತ್ರಾಂಶದಿಂದ ಸಾರ್ವಜನಿಕರು ಮತ್ತು ಸರ್ಕಾರ ಇಬ್ಬರಿಗೂ ಅನುಕೂಲವಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.
ಆಸ್ತಿಗಳ ವರ್ಗೀಕರಣ
* ಗ್ರಾಮ ಠಾಣಾ ಮತ್ತು ಅದರ ಹೊರಗೆ ಸರ್ಕಾರದ ವಸತಿ ನಿಗಮ ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ ಆಸ್ತಿ
* ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ನಕ್ಷೆ ಅನುಮೋದಿಸಿದ ಆಸ್ತಿ
* ಮಂಡಲ ಅಥವಾ ಗ್ರಾಮ ಪಂಚಾಯಿತಿಯಿಂದ ನಕ್ಷೆ ಅನುಮೋದಿಸಿದ ಆಸ್ತಿ
* ಕೆಐಎಡಿಬಿ ಕೆಎಸ್‌ಎಸ್‌ಐಡಿಸಿಯಿಂದ ಕೈಗಾರಿಕಾ ನಕ್ಷೆ ಅನುಮೋದಿಸಿದ ಆಸ್ತಿ
* ಭೂ ಕಂದಾಯ ಕಾಯ್ದೆಯಡಿ ಸರ್ಕಾರ ಮಂಜೂರು ಮಾಡಿದ ವಸತಿ ನಿವೇಶನ
* ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾದ ಆಸ್ತಿ
* ಪುನರ್ವಸತಿ ಯೋಜನೆಯಡಿ ಮಂಜೂರಾದ ಆಸ್ತಿ
* ಹಿಸ್ಸಾ ಪತ್ರದ ಮೂಲಕ ಬಂದ ವೈಯಕ್ತಿಕ ಕುಟುಂಬದ ಆಸ್ತಿ
* ಕೇಂದ್ರ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳು ನಿಗಮ ಮಂಡಳಿಗಳ ನಿವೇಶನ ಮತ್ತು ಕಟ್ಟಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.