ADVERTISEMENT

ನಗರದಲ್ಲಿಯೂ ‘ಅರ್ಥ್‌ ಅವರ್‌’ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 19:34 IST
Last Updated 27 ಮಾರ್ಚ್ 2021, 19:34 IST

ಬೆಂಗಳೂರು: ಹವಾಮಾನ ಬದಲಾವಣೆ ಕುರಿತು ವಿಶ್ವದಾದ್ಯಂತ ಆಚರಿಸಿದ ‘ಅರ್ಥ್‌ ಅವರ್‌’ಗೆ ನಗರದಲ್ಲಿಯೂ ಶನಿವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

ಶನಿವಾರ ರಾತ್ರಿ 8.30ರಿಂದ 9.30ರ ಅವಧಿಯಲ್ಲಿ ಬಹುತೇಕರು ತೀರಾ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಿ, ಉಳಿದ ವಿದ್ಯುತ್‌ ದೀಪಗಳನ್ನು ನಂದಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದರು.

ಪರಿಸರ ಕುರಿತಾದ ವರ್ಲ್ಡ್‌ ವೈಡ್‌್ ಫಂಡ್‌ (ಡಬ್ಲ್ಯುಡಬ್ಲ್ಯುಎಫ್‌) ಪ್ರತಿ ವರ್ಷ ಈ ‘ಅರ್ಥ್‌ ಅವರ್‌’ ಆಚರಿಸುತ್ತದೆ. ಪರಿಸರ ಸಂರಕ್ಷಣೆಯ ಜಾಗೃತಿಗಾಗಿಯೂ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ. 14 ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದೆ.

ADVERTISEMENT

ವಿದ್ಯುತ್‌ ಬಳಕೆಯನ್ನು ನಿಯಂತ್ರಿಸಿ, ತಾಪಮಾನವನ್ನು ಕಡಿಮೆ ಮಾಡುವ ಮೂಲಕ ಭೂಮಿಗೊಂದು ತಾಸು ಮೀಸಲಿಡುವ ಈ ಆಂದೋಲನಕ್ಕೆ ನಗರವೂ ಸಾಕ್ಷಿಯಾಯಿತು. ಪ್ರಮುಖವಾಗಿ ಬೆಸ್ಕಾಂ ಸಿಬ್ಬಂದಿ ತಮ್ಮ ಮನೆಗಳಲ್ಲಿ ಅನಗತ್ಯವಾದ ವಿದ್ಯುತ್‌ ದೀಪಗಳನ್ನು ಒಂದು ತಾಸು ಆರಿಸುವ ಮೂಲಕ ಬೆಂಬಲ ನೀಡಿದರು.

ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಮಾತ್ರವಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಶೇ 50ರಷ್ಟು ವಿದ್ಯುತ್‌ ದೀಪಗಳನ್ನು ಮಾತ್ರ ಉರಿಸಲಾಯಿತು. ವಿಧಾನಸೌಧ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಲ್ಲಿ ಮತ್ತು ಯು.ಬಿ. ಸಿಟಿ ಹಾಗೂ ಮಂತ್ರಿ ಮಾಲ್‌ ಸೇರಿದಂತೆ ಹಲವು ಶಾಪಿಂಗ್‌ ಮಾಲ್‌ಗಳಲ್ಲಿಯೂ ಈ ಒಂದು ತಾಸಿನಲ್ಲಿ ಅಗತ್ಯವಿರುವಷ್ಟು ದೀಪಗಳನ್ನು ಮಾತ್ರ ಉರಿಸಲಾಯಿತು.

‘ಪ್ರತಿ ವರ್ಷದಂತೆ ಈ ಬಾರಿಯೂ ಈ ಅಭಿಯಾನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಬೆಸ್ಕಾಂ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಬಳಸುತ್ತಿದ್ದ ಸರಾಸರಿ ವಿದ್ಯುತ್ ಪ್ರಮಾಣ ಮತ್ತು ಮಾ.27ರ ರಾತ್ರಿ 8.30 ರಿಂದ 9.30ರ ಅವಧಿಯಲ್ಲಿ ಬಳಸುತ್ತಿದ್ದ ವಿದ್ಯುತ್ ಪ್ರಮಾಣ ಹೋಲಿಕೆ ಮಾಡಿದರೆ, ಎಷ್ಟು ಉಳಿತಾಯವಾಗಿದೆ ಎಂಬುದು ನಂತರ ತಿಳಿಯಲಿದೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ:

‘ಬೆಂಗಳೂರಿನಲ್ಲಿ ಆಗಾಗ ವಿದ್ಯುತ್‌ ಕಡಿತವಾಗುತ್ತಲೇ ಇರುವುದರಿಂದ ನಮಗೆ ನಿತ್ಯವೂ ‘ಅರ್ಥ್ ಅವರ್‌’. ಈ ನಿಟ್ಟಿನಲ್ಲಿ ನೋಡುವುದಾದರೆ ನಾವು ದಿನವೂ ಪರಿಸರ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಂಡಿರುತ್ತೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವ್ಯಂಗ್ಯಭರಿತ ಪೋಸ್ಟ್‌ಗಳನ್ನು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.