ADVERTISEMENT

ವಿದ್ಯಾವಂತರನ್ನೂ ಕಾಡುತ್ತಿದೆ ನಿರುದ್ಯೋಗ ಸಮಸ್ಯೆ: ಸಾಹಿತಿ ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 19:56 IST
Last Updated 23 ಜನವರಿ 2022, 19:56 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ‘ಕೋವಿಡ್ ಕಾಣಿಸಿಕೊಂಡ ಬಳಿಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾವಂತರೂ ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ–ಕರ್ನಾಟಕ ರಾಜ್ಯ ಸಮಿತಿ, ಡಿವೈಎಫ್‌ಐ ರಾಜ್ಯ ಸಮಿತಿ ಹಾಗೂ ಗ್ರಾಮ ಭಾರತ ಬೆಂಗಳೂರು ಹಮ್ಮಿಕೊಂಡ ‘ನಿರುದ್ಯೋಗ ಸಮಸ್ಯೆ ಮತ್ತು ಸವಾಲು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ 65 ಕೋಟಿ ಯುವಜನರು ಇದ್ದಾರೆ. ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿ ಬೆಳೆದಿದೆ. ವಿದ್ಯಾವಂತರು ಹಾಗೂ ಅವಿದ್ಯಾವಂತರು ಎಂಬ ಭೇದವಿಲ್ಲದೇ ಎಲ್ಲರಿಗೂ ಉದ್ಯೋಗ ಬೇಕು. ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ ಕೋವಿಡ್ ಕಾಣಿಸಿಕೊಂಡ ಬಳಿಕ 1.47 ಕೋಟಿ ಮಂದಿ ಸಂಘಟಿತ ವಲಯದಲ್ಲಿಯೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕು’ ಎಂದರು.

‘ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ನೀತಿಗೂ ಸಂಬಂಧವಿದೆ. ನಿರುದ್ಯೋಗ ಮತ್ತು ಹಸಿವು ಒಟ್ಟಿಗೆ ಸಾಗುತ್ತವೆ. ಸರ್ಕಾರಗಳು ಹಸಿವನ್ನು ನೀಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮುಖ್ಯ. ಆದರೆ, ನಮ್ಮ ಆರ್ಥಿಕ ನೀತಿಯ ದೌರ್ಬಲ್ಯದಿಂದ ಬಡವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಕೋಟ್ಯಾಧಿಪತಿಗಳ ಆದಾಯ ದ್ವಿಗುಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ದೇಶವು ಕೊರೊನಾ ಜತೆಗೆ ಅಸಮಾನತೆಯ ವೈರಾಣುವಿನಿಂದಲೂ ನರಳುತ್ತಿದೆ. ಕೋಟ್ಯಾಧೀಶರ ಸಂಖ್ಯೆ ಹೆಚ್ಚಾದರೆ ದೇಶ ಮುಂದುವರಿದಿದೆ ಎನ್ನಬಹುದೆ? ಉಳ್ಳವರು, ಇಲ್ಲದವರ ನಡುವಿನ ಕಂದಕವನ್ನು ನಿವಾರಿಸಬೇಕು. ಪ್ರಜಾಪ್ರಭುತ್ವದಲ್ಲಿ ಯಾರೂ ಅನ್ನ ಇಲ್ಲದೆ ಸಾಯಬಾರದು. ಸಮಾನತೆ ಕೇಂದ್ರಿತ ಆರ್ಥಿಕ ನೀತಿ ಮುಖ್ಯ. ಈ ದೇಶಕ್ಕೆ ಜಾಗತೀಕರಣ ಕಾಂಗ್ರೆಸ್‌ನ ಕೂಸಾಗಿದೆ. ಅದನ್ನು ಈಗಿನ ಸರ್ಕಾರ ಪೋಷಿಸುತ್ತಿದೆ’ ಎಂದು ಟೀಕಿಸಿದರು.

‘ಖಾಸಗೀಕರಣ, ಉದ್ಯೋಗ, ಉದ್ಯಮದ ನೀತಿ’ ಕುರಿತು ಮಾತನಾಡಿದ ಕೆ. ಪ್ರಕಾಶ್, ‘ಖಾಸಗೀಕರಣ 1991ರ ನಂತರ ಮುನ್ನೆಲೆಗೆ ಬಂದಿತು. ಸಾರ್ವಜನಿಕ ಕ್ಷೇತ್ರವನ್ನು ಕಟ್ಟಬೇಕೆಂಬ ಆಶಯವನ್ನು ಖಾಸಗೀಕರಣ ನೀತಿ ಹೊಂದಿರಲಿಲ್ಲ. ಇದು ಬಂಡವಾಳಶಾಹಿಗಳ ಪರವಾಗಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.