ಬೆಂಗಳೂರು: ‘ಬಿಬಿಎಂಪಿಯ ಪಶುಪಾಲನಾ ವಿಭಾಗವು ಬೀದಿನಾಯಿಗಳ ಸಂಖ್ಯೆ ಮತ್ತು ರೇಬೀಸ್ ರೋಗವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದೆ’ ಎಂದು ಆರೋಗ್ಯ, ನೈರ್ಮಲ್ಯ ಮತ್ತು ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ನಿರಂತರವಾಗಿ ನಿಯಮಾನುಸಾರ, ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಯ ಅನುಸಾರ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಬೀದಿನಾಯಿಗಳನ್ನು ರೇಬೀಸ್ ರೋಗದಿಂದ ರಕ್ಷಿಸುವ ಸಲುವಾಗಿ ಲಸಿಕೆಯನ್ನು, ಆ್ಯಂಟಿ ರೇಬೀಸ್ ವ್ಯಾಕ್ಸಿನೇಷನ್(ಎಆರ್‌ವಿ) ಕಾರ್ಯಕ್ರಮದಡಿಯಲ್ಲಿ ನೀಡಲಾಗುತ್ತಿದೆ. ದೂರುಗಳಿಗಾಗಿ ರೇಬೀಸ್ ಸಹಾಯವಾಣಿ 6364893322 ಹಾಗೂ ಪಾಲಿಕೆ ಸಹಾಯವಾಣಿ 1533ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ಕೆನಲ್ ಸಾಮರ್ಥ್ಯ ಹೆಚ್ಚಳ:
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಎಬಿಸಿ ಕೇಂದ್ರಗಳನ್ನು ಒಳಗೊಂಡಂತೆ ಒಂದು ನಾಯಿಯನ್ನು ಇಡಬಹುದಾದಂತಹ 424 ಕೆನಲ್ಸ್, 10 ರಿಂದ 15 ನಾಯಿಗಳನ್ನು ಇಡಬಹುದಾದಂತಹ ಎಂಟು ಕೆನಲ್‌ಗಳು ಹಾಗೂ ರೇಬೀಸ್ ನಾಯಿಗಳಿಗಾಗಿ ಚಿಕಿತ್ಸೆ ನೀಡಲು ನಾಲ್ಕು ಐಸೋಲೇಷನ್ ಕೆನಲ್‌ಗಳಿವೆ. ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ.
ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಯುವ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸಾ ಕೇಂದ್ರಗಳ ದುರಸ್ತಿ ಮತ್ತು ವಿಸ್ತರಣಾ ಕಾಮಗಾರಿಗಳಿಗೆ 2024-25ನೇ ಸಾಲಿನಲ್ಲಿ ಅಂದಾಜು ₹ 1.77 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.